ರಾಯಚೂರು: ದೇವದುರ್ಗ ತಾಲೂಕಿನ ಗಬ್ಬೂರು ಹೋಬಳಿಯ ಮಸೀದಾಪುರ ಗ್ರಾಮವನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಪ್ರತಿ ವರ್ಷ ಮಳೆಗಾಲ ಬಂದಾಗ ಇಡೀ ಗ್ರಾಮ ಜಲಾವೃತವಾಗುತ್ತದೆ. ಇದರಿಂದ ಗ್ರಾಮದಲ್ಲಿನ ಜನರು ಜೀವ ಭಯದಿಂದ ಜೀವಿಸುವಂತಾಗಿದೆ. 2009ರ ನೆರೆಹಾವಳಿಯಲ್ಲಿ ಅನೇಕ ಮನೆಗಳು ಕುಸಿದು ಸಾವುಗಳು ಸಂಭವಿಸಿವೆ.
ಗ್ರಾಮ ತಗ್ಗು ಪ್ರದೇಶದಲ್ಲಿ ಇರುವುದರಿಂದ ಮಳೆಯಿಂದ ತೇವಾಂಶ ಹೆಚ್ಚಾಗಿ ಮನೆಗಳು ಕುಸಿದು ಬಿಳುತ್ತಿವೆ. ಕಳೆದ ವಾರ ಸುರಿದ ಮಳೆಯಿಂದ ಗ್ರಾಮದ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.