ರಾಯಚೂರು: ಹಣಕಾಸಿನ ವಿಚಾರವಾಗಿ ಬೆಂಗಳೂರಿನಲ್ಲಿ ವ್ಯಕ್ತಿವೋರ್ವನನ್ನ ಅಪಹರಣ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತಂಕಗೊಂಡಿರುವ ಆತನ ಪೋಷಕರು ಮಗನನ್ನು ಬಿಡಿಸಿಕೊಂಡು ಬನ್ನಿ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೊನವಾಟ್ಲತಾಂಡ-2 ನಿವಾಸಿ ಪ್ರಕಾಶ್ ರಾಠೋಡ ಅಪಹರಣಕ್ಕೆ ಒಳಗಾಗಿರುವ ವ್ಯಕ್ತಿ. ಈತ ಬೆಂಗಳೂರಿಗೆ ಕುಟುಂಬದವರೊಡನೆ ಕೂಲಿ ಕೆಲಸಕ್ಕೆ ತೆರಳಿದ್ದ. ಕಳೆದ ಭಾನುವಾರ ಬೆಂಗಳೂರಲ್ಲಿ ನಾಲ್ಕೈದು ಜನರ ತಂಡ ವಾಹನದಲ್ಲಿ ಬಂದು ಅಪರಹಣ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಪ್ರಕಾಶ್ ರಾಠೋಡ ಸ್ನೇಹಿತ ಮಂಜುನಾಥಗೆ ಅಪಹರಣಕಾರರು ದೂರವಾಣಿ ಕರೆ ಮಾಡಿ ವಿಷಯವನ್ನ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕಾಶ್ ಹಣಕಾಸಿನ ವಿಚಾರವಾಗಿ ಸುಮಾರು 3.5 ಲಕ್ಷ ರೂಪಾಯಿ ಹಣ ನೀಡಬೇಕಾಗಿದೆ. ಈ ಹಣವನ್ನ ಹಲವು ದಿನಗಳಿಂದ ನೀಡುತ್ತಿಲ್ಲವೆಂಬ ಕಾರಣ ಅಪಹರಣ ಮಾಡಲಾಗಿದ್ದು, ಹಣ ತಂದರೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ದುಡಿದು ತಿನ್ನುವ ಪರಿಸ್ಥಿತಿಯಲ್ಲಿರುವ ಪ್ರಕಾಶ್ ರಾಠೋಡನ ಪೋಷಕರು ನಮ್ಮಲ್ಲಿ ಅಷ್ಟೊಂದು ಹಣವಿಲ್ಲ. ನಾವು ಎಲ್ಲಿಂದ ಹಣ ಹೊಂದಿಸೋದೆಂದು ದಿಕ್ಕು ತೋಚದಂತಾಗಿದ್ದಾರೆ.