ರಾಯಚೂರು: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಗೆ ಈಜಲು ನೀರಿಗೆ ಇಳಿದ ಮೂವರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಅಜಯ(ಆದಯ್ಯ) ಜಾಲಹಳ್ಳಿ ನೀರು ಪಾಲಾಗಿದ್ದಾರೆ.
ಮೃತದೇಹದ ಪತ್ತೆಗೆ ಹುಡುಕಾಟ ನಡೆದಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಲಿಂಗಸುಗೂರು ತಾಲ್ಲೂಕು ದೇವರಭೂಪುರ ಬಳಿಯ ಮುಖ್ಯ ಕಾಲುವೆಯಲ್ಲಿ ಈ ಘಟನೆ ನಡೆದಿದೆ. ಗುರುಗುಂಟಾ ಅಮರೇಶ್ವರ ಜಾತ್ರೆಗೆ ಕುಟುಂಬಸ್ಥರು, ಸ್ನೇಹಿತರೊಂದಿಗೆ ತೆರಳಿದ್ದ ಅಜಯ, ನೋಡು ನೋಡುತ್ತಲೇ ನೀರಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಮೂಲತಃ ಮಸ್ಕಿ ಪಟ್ಟಣದ ಅಜಯ(ಆದಯ್ಯ) ಜಾಲಿಹಾಳ ಲಿಂಗಸುಗೂರು ಪಟ್ಟಣದಲ್ಲಿ ರಸಗೊಬ್ಬರ ಮಾರಾಟ ಮಳಿಗೆ ಮಾಡಿಕೊಂಡಿದ್ದರು. ಒಂದೂವರೆ ತಿಂಗಳ ಹಿಂದೆ ಮದುವೆ ಆಗಿದ್ದರಿಂದ ಪತ್ನಿ, ಸಹೋದರ, ಸಹೋದರಿಯರು, ಸ್ನೇಹಿತರ ಜೊತೆ ದೇವರ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳಿದ್ದರು. ದೇವಸ್ಥಾನದಿಂದ ಅನತಿ ದೂರದಲ್ಲಿದ್ದ ಕಾಲುವೆಗೆ ಸ್ನಾನಕ್ಕೆಂದು ಶುಕ್ರವಾರ ಬೆಳಗ್ಗಿನ ಜಾವ ಸಹೋದರ ಅಮರೇಶ, ಮಾವ ವಿರುಪಾಕ್ಷಪ್ಪ ಜೊತೆ ನೀರಿಗೆ ಇಳಿದಾಗ ದುರ್ಘಟನೆ ಜರುಗಿದೆ.
ಅಮರೇಶ ಮತ್ತು ವಿರುಪಾಕ್ಷಪ್ಪ ಅವರನ್ನು ದಡದಲ್ಲಿದ್ದ ಮಹಿಳೆಯರು ಸೀರೆ ನೀಡಿ ರಕ್ಷಣೆ ಮಾಡಿದ್ದರು. ಇಬ್ಬರ ರಕ್ಷಣೆ ನಂತರ ಅಜಯ ರಕ್ಷಣೆಗೆ ಎಷ್ಟೆಲ್ಲ ಪ್ರಯತ್ನಪಟ್ಟರೂ ರಕ್ಷಿಸಲು ಆಗಲಿಲ್ಲ ಎಂದು ಮಹಿಳೆಯರು ಕಣ್ಣೀರಿಟ್ಟರು.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಎಸ್.ಎಸ್.ಹುಲ್ಲೂರು, ಸಿಪಿಐ ಮಹಾಂತೇಶ ಸಜ್ಜನ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ನೇತೃತ್ವದಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮೃತದೇಹ ಪತ್ತೆಗೆ ಹುಡುಕಾಟ ಪ್ರಾರಂಭಿಸಿದ್ದಾರೆ. ಸ್ಥಳೀಯ ಈಜುಗಾರರು, ಸ್ನೇಹಿತರು ಹುಡುಕಾಟ ಮುಂದುವರೆಸಿದ್ದಾರೆ.