ರಾಯಚೂರು: ಜಿಲ್ಲಾ ಪಂಚಾಯತಿ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಕಾಲಕಾಲಕ್ಕೆ ಸಭೆ ನಡೆಸದ ಕಾರಣಕ್ಕಾಗಿ 15 ದಿನದೊಳಗೆ ಕಾರಣ ನೀಡಿ ಉತ್ತರಿಸುವಂತೆ ಜಿ.ಪಂ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಪಿ.ದೇವ ಸಹಾಯಂ ನೋಟಿಸ್ ಜಾರಿ ಮಾಡಿದ್ದಾರೆ.
ಪಂಚಾಯತ್ ರಾಜ್ ಕಾಯ್ದೆಯಂತೆ ಎರಡು ತಿಂಗಳಲ್ಲಿ ಕನಿಷ್ಟ ಒಂದು ಬಾರಿಯಾದರೂ ಸಭೆ ನಡೆಸಬೇಕು. ಆದರೆ 2015-16 ನೇ ಸಾಲಿನಲ್ಲಿ ಒಂದು ಬಾರಿ ಹಾಗೂ 2016-17 ನೆ ಸಾಲಿನಲ್ಲಿ ಒಂದು ಬಾರಿ ಮಾತ್ರ ಸಭೆ ನಡೆಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 263 ರಡಿ ಸದಸ್ಯರಿಗೆ ಹಾಗೂ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಧ್ಯಕ್ಷರ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯದಿದ್ದಲ್ಲಿ ಸದಸ್ಯರು ವಿಶೇಷ ಸಭೆ ಕರೆದು ಚರ್ಚಿಸಬೇಕು. ಆದರೆ ಸದಸ್ಯರು ಇಂತಹ ಯಾವುದೇ ಕೆಲಸ ಮಾಡದೇ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಕಾರಣ ನೀಡಿ ಎಂದು 15 ದಿನದೊಳಗೆ ಉತ್ತರ ನೀಡುವಂತೆ ನೋಟಿಸ್ ನೀಡಿದೆ.
ಈ ಕುರಿತು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕರು ಡಾ.ರಜಾಕ್ ಉಸ್ತಾದ್ ಈ ಹಿಂದೆ ಜಿಲ್ಲಾ ಪಂಚಾಯತಿ ವಿಸರ್ಜಿಸಲು ದೂರು ನೀಡಿದ್ದರು. ಈ ಹಿಂದೆಯೂ ರಾಯಚೂರು ಜಿ.ಪಂ ಸಿಇಓ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಬಾರಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ನೋಟಿಸ್ ಜಾರಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.