ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಎಂಇಪಿ ಪಕ್ಷದ ಅಭ್ಯರ್ಥಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ.
ಬಾಬು ನಾಯಕ ಎಂಬುವವರು ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ಅಡ್ಡ ಮತದಾನವಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ತುರುವಿಹಾಳ ವಿರುದ್ಧ ಕೇವಲ 213ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರತಾಪ್ ಗೌಡ ಪಾಟೀಲ್ ಜಯಗಳಿಸಿದ್ದರು. ನಂತರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ವಿರುದ್ದ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಪಕ್ಷದಿಂದ ಪ್ರತಾಪಗೌಡ ಪಾಟೀಲ್ ಅನರ್ಹಗೊಂಡು, ಕಾನೂನು ಹೋರಾಟ ಮಾಡಿ ಬಳಿಕ ಬಿಜೆಪಿ ಪಕ್ಷಕ್ಕೆ ಸೇರಿದ್ದರು.
ಪ್ರತಾಪಗೌಡ ಪಾಟೀಲ್ ರಾಜೀನಾಮೆ ನೀಡಿದ್ದರಿಂದ ಮಸ್ಕಿ ವಿಧಾನಸಭಾ ಉಪ ಚುನಾವಣೆ ನಡೆಯಬೇಕಿತ್ತು. ಆದರೆ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಬಿಜೆಪಿ ಅಭ್ಯರ್ಥಿ ಬಸನಗೌಡ ತರುವಿಹಾಳ, ಹೈಕೋರ್ಟ್ ನಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ದಾವೆ ಹಾಕಿದ್ದರು. ಇದರಿಂದಾಗಿ ಬೈ ಎಲೆಕ್ಷನ್ ವಿಳಂಬವಾಯಿತು. ಈ ವೇಳೆ, ಬಿಜೆಪಿ ಹೈಕಮಾಂಡ್ ಬಸವನಗೌಡ ತುರುವಿಹಾಳಿಗೆ ಮನವೊಲಿಸಿ ಕಾಡ ಅಧ್ಯಕ್ಷ ಸ್ಥಾನ ನೀಡಿದ್ದರು. ಹೀಗಾಗಿ ಇತ್ತೀಚೆಗೆ ಹೈಕೋರ್ಟ್ ನಲ್ಲಿ ಹಾಕಿದ್ದ ದಾವೆಯನ್ನ ವಾಪಾಸ್ ಪಡೆದಿದ್ದರು. ಇದರಿಂದ ಮಸ್ಕಿ ಉಪಚುನಾವಣೆ ವಿಘ್ನ ದೂರವಾಗಿತ್ತು. ಆದ್ರೆ ಇದೀಗ ಮತ್ತೆ ಎಂಇಪಿ ಪಕ್ಷದಿಂದ ಸ್ಪರ್ಧಿ ಮಾಡಿದ ಬಾಬು ನಾಯಕ 2020 ಜ.3ರಂದು ಮಸ್ಕಿ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ದಾವೆ ಸಲ್ಲಿಸಿದ್ದು, ಮಸ್ಕಿ ಕ್ಷೇತ್ರದ ಉಪಚುನಾವಣೆಗೆ ಮತ್ತೊಂದು ವಿಘ್ನ ಎದುರಾಗಿದೆ.