ರಾಯಚೂರು: ಇಡೀ ದೇಶಕ್ಕೆ ಕೊರೊನಾ ಎಂಬ ಮಹಾಮಾರಿ ಬಂದಿದೆ. ಆದ್ರೆ ನರೇಂದ್ರ ಮೋದಿಯವರು ಇದನ್ನು ಯಶಸ್ವಿಯಾಗಿ ಎದುರಿಸಿದ್ದು, ಇದೀಗ ಪ್ರಪಂಚದ ಎದುರು ಹೀರೋ ಆಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ತಾಲೂಕಿನಲ್ಲಿ ಮಾತನಾಡಿದ ಅವರು, ಈ ಕೊರೊನಾ ಮಹಾಮಾರಿಯನ್ನು ಹೋಗಲಾಡಿಸುವಂತೆ ಪ್ರಾರ್ಥನೆ ಮಾಡಲು ಮಂತ್ರಾಲಯಕ್ಕೆ ಹೋಗಿದ್ದೆ. ವಿಶೇಷ ಅನುಮತಿ ಪಡೆದು ರಾಯರ ದರ್ಶನ ಪಡೆದು ಸ್ವಾಮೀಜಿ ಭೇಟಿ ಮಾಡಿದ್ದೇನೆ. ಈ ವೇಳೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದರು.
ನಂತರ ಡಿನ್ನರ್ ಪೊಲಿಟಿಕ್ಸ್ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ಉತ್ತರಿಸಿದ ಅವರು, ಅದರ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲರೂ ಒಂದೆಡೆ ಸೇರಬಾರದಾ? ಊಟಕ್ಕೆ ಸೇರಿದ್ದಾರೆ. ಅನಿವಾರ್ಯವಾಗಿ ಕೆಲವು ಆಗಲೇಬೇಕಿದೆ. ರಮೇಶ್ ಕತ್ತಿ, ದಿನೇಶ್ ಕತ್ತಿ ಏನ್ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.
ನಂತರ ಮಾತು ಮುಂದುವರೆಸಿ, ನರೇಗಾ ಮೂಲಕ ಗ್ರಾಮೀಣ ಭಾಗದ ಬಡವರಿಗೆ ಉದ್ಯೋಗ ಸೃಷ್ಟಿ ಮಾಡಲಾಗಿದೆ. 5,800ಕ್ಕೂ ಹೆಚ್ಚು ಕೆಲಸವನ್ನು ಗ್ರಾಮ ಪಂಚಾಯಿತಿಯಲ್ಲಿ ಕೊಟ್ಟಿದ್ದೇವೆ. ಹಿಂದಿನ ಬಾಕಿ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಯಾರೇ ಬಂದರೂ ಜಾಬ್ ಕಾರ್ಡ್ ಮಾಡಿ ಕೆಲಸ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರದ 20 ಲಕ್ಷ ಕೋಟಿಯಲ್ಲಿ 40 ಸಾವಿರ ಕೋಟಿ ಹಣವನ್ನ ಬಡವರಿಗೆ ಉದ್ಯೋಗ ಕೊಡಲು ಮೀಸಲಿಟ್ಟಿದೆ. ಗ್ರಾಮ ಪಂಚಾಯಿತಿ ಅವಧಿ ಮುಗಿಯುತ್ತಿರುವ ಹಿನ್ನೆಲೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಿವರಿಸಿದರು.