ರಾಯಚೂರು: ಜಿಲ್ಲೆಯ ಅರಕೇರಾ ಗ್ರಾಮ ಇನ್ನು ತಾಲೂಕು ಕೇಂದ್ರವಾಗಲಿದೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಅರಕೇರಾದಲ್ಲಿ ಆಯೋಜಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸಚಿವರು ಉದ್ಘಾಟಿಸಿ, ಇನ್ಮೇಲೆ ಅರಕೇರಾ ತಾಲೂಕಾಗಲಿದೆ ಎಂದರು.
ಅರಕೇರಾ ಗ್ರಾಮ ಗ್ರಾಮವಲ್ಲ. ಇನ್ಮೇಲೆ ಇದು ತಾಲೂಕಾಗಲಿದೆ. ತಹಶೀಲ್ದಾರ್ ಸೇರಿ ಅಧಿಕಾರಿಗಳನ್ನು ನೂತನ ತಾಲೂಕಿಗೆ ನೇಮಿಸಿದ್ದೇವೆ ಎಂದು ಸಚಿವರು ತಿಳಿಸಿದರು. ಗ್ರಾಮ ವಾಸ್ತವ್ಯ ಯೋಜನೆ ಜಿಲ್ಲಾಧಿಕಾರಿಗಳನ್ನು ಗ್ರಾಮದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿದೆ. ಕರ್ನಾಟಕದ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಗ್ರಾಮದಲ್ಲಿ ಇದ್ದಾರೆ ಎಂದರು.
ಗ್ರಾಮ ವಾಸ್ತವ್ಯ ಮಾಡುವ ಪ್ರತಿ ಹಳ್ಳಿಗೆ 1 ಕೋಟಿ ನೀಡುತ್ತೇನೆ. ಗ್ರಾಮ ವಾಸ್ತವ್ಯ ಅಂದರೆ ಗ್ರಾಮದಲ್ಲಿ ಮಲಗುವುದು ಅಲ್ಲ, ಸ್ಥಳದಲ್ಲಿಯೇ ಆದೇಶವಾಗಬೇಕು. ಇದು ನನ್ನ ಜೀವನದ ದಿಕ್ಕನ್ನೆ ಬದಲಿಸಿದೆ. ಗ್ರಾಮದಲ್ಲಿ ವಾಸ್ತವ್ಯ ಮಾಡಿದಾಗಲೇ ಈ ಯೋಜನೆಗಳು ಜಾರಿಗೆ ಬಂದಿದ್ದು, ಇದು ಹೃದಯ ಸ್ಪರ್ಶ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ನಮ್ಮದು ಜನ ಸರ್ಕಾರ, ಫ್ಯಾಮಲಿ ಪ್ಯಾಕ್ ಸರ್ಕಾರವಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಆದರೂ ತಾಂಡಗಳಿಗೆ ಹೆಸರಿಲ್ಲ. ಆ ತಾಂಡಗಳಿಗೆ ಈಗ ಹೆಸರು ನೀಡಿದ್ದೇವೆ. 1 ಲಕ್ಷ ತಾಂಡ ಜನರಿಗೆ ಜಾಗ ನೋಂದಣಿ ಮಾಡಿಸಲಾಗಿದೆ. 175 ಗ್ರಾಮಗಳನ್ನು ಕಂದಾಯ ಗ್ರಾಮ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
Toll Free 155245: ಹಲೋ ಕಂದಾಯ ಸಚಿವರೇ ಸಹಾಯವಾಣಿಗೆ ಕರೆ ಮಾಡಿದರೆ ನಿಮ್ಮ ಮನೆಗೆ ಪಿಂಚಣಿ ಬರುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಂದರೆ ಮಳೆಯಿಂದ ಕರೆ ಕುಂಟೆ ತುಂಬುತ್ತವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದ ಮೇಲೆ ಕರೆ ಕುಂಟೆ ಫುಲ್ ಭರ್ತಿಯಾಗುತ್ತಿವೆ ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ: ತುಮಕೂರಿನ ಮಾಯಸಂದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿರುವ ಸಚಿವ ಆರ್.ಅಶೋಕ್