ರಾಯಚೂರು : ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಮಸ್ಕಿಯಲ್ಲಿ ಬಿಜೆಪಿ ಶಕ್ತಿ ಕೇಂದ್ರ ಮೇಲ್ಪಟ್ಟವರ ಹಾಗೂ ಪ್ರಮುಖರ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ನ ಆಡಳಿತಕ್ಕೆ ಬೇಸತ್ತು 17 ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ತ್ಯಾಗದ ಫಲವಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ ಎಂದರು.
ಮುಂಬರುವ ದಿನಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಬಸವನಗೌಡ ತುರುವಿಹಾಳ ಗೈರು : ಕಾಡಾ ಅಧ್ಯಕ್ಷ ಬಸವನಗೌಡ ತುರುವಿಹಾಳ ಸಭೆಗೆ ಗೈರಾಗಿದ್ದರು. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡುವ ಮೂಲಕ ಅಲ್ಪ ಮತಗಳಿಂದ ಪರಾಜಿತಗೊಂಡಿದ್ದರು. ಚುನಾವಣೆಯಲ್ಲಿ ಅಕ್ರಮ ಮತದಾನವಾಗಿದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಾದ ಬಳಿಕ ಪಕ್ಷದ ವರಿಷ್ಠರು, ಬಸವನಗೌಡ ತುರುವಿಹಾಳ ಮನವೊಲಿಸಿ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದರು.
ಇದೀಗ ಪಕ್ಷದ ರಾಜ್ಯಾಧ್ಯಕ್ಷರು ಸಭೆ ಮಾಡಿದ್ದರೂ, ಸಭೆಯಲ್ಲಿ ಭಾಗವಹಿಸದಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅಲ್ಲದೇ ಬರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸಭೆಯಲ್ಲಿ ಶಾಸಕರಾದ ಡಾ.ಶಿವರಾಜ್ ಪಾಟೀಲ್, ರಾಜುಗೌಡ, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಸವನಗೌಡ ಬ್ಯಾಗವಾಟ್ ಭಾಗವಹಿಸಿದರು.