ರಾಯಚೂರು: ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸ್ಕಿ ತಾಲೂಕು ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಮಣಿಕಂಠ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ರ್ಯಾಕ್ಟರ್ ಚಾಲಕ ನಿರುಪಾದಿ ನಾಯಕ ಎಂಬವರ ಮೇಲೆ ಪಿಎಸ್ಐ ಮಣಿಕಂಠ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು.
ಈ ಕುರಿತು ನಿರುಪಾದಿ ಪತ್ನಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಜಾತಿ ನಿಂದನೆಯ ದೂರು ದಾಖಲಿಸಿದ್ದರು. ಪಿಎಸ್‌ಐ ವರ್ತನೆಯನ್ನು ಖಂಡಿಸಿ ವಾಲ್ಮೀಕಿ ಸಮುದಾಯದ ಸಂಘಟನೆಗಳು ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಪಿಎಸ್‌ಐ ವಿರುದ್ಧ ಐಪಿಸಿ ಸೆಕ್ಷನ್ 324, 504, 506, 3(1)(ಆರ್)(ಎಸ್), 3(2)(ವಿಎ) ಎಸ್/ಎಸ್‌ಟಿ ತಿದ್ದುಪಡಿ ಕಾಯಿದೆ-2015ರ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು.
ನಿಮ್ಮ ದುರ್ವತನೆಯಿಂದ ಪೊಲೀಸ್ ಇಲಾಖೆಗೆ ಧಕ್ಕೆ ಉಂಟಾಗಿದ್ದು ಈ ರೀತಿಯ ನಡತೆಯಿಂದ ಸಾರ್ವಜನಿಕರ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಹೀಗಾಗಿ ಕರ್ತವ್ಯದಲ್ಲಿ ದುರ್ನಡತೆ ತೋರಿಸಿದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡುವಳಿಗಳು) ನಿಯಮಗಳು 1965 (ತಿದ್ದುಪಡಿ 1989) ನಿಯಮ 5ರ ಮೇರೆಗೆ ಇರುವ ಅಧಿಕಾರ ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಪಿಎಸ್ಐ ಮಣಿಕಂಠರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಬಿ.ಎಸ್.ಲೋಕೇಶ್ ಕುಮಾರ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ವಕೀಲನ ಮೇಲೆ ಹಲ್ಲೆ ಆರೋಪ.. ಹಾನಗಲ್ ಠಾಣೆ ಪಿಎಸ್ಐ ಅಮಾನತು