ರಾಯಚೂರು: ಕೊರೊನಾ ಎರಡನೇಯ ಅಲೆ ನಿಯಂತ್ರಿಸಲು ಸರ್ಕಾರ ಅನೇಕ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆದ್ರೆ ಬೈ ಎಲೆಕ್ಷನ್ಗೆ ಕೊರೊನಾ ನಿಯಮಗಳು ಪಾಲನೆಯಾಗದೇ ಇರುವ ದೃಶ್ಯಗಳು ನಗರದಲ್ಲಿ ನಿತ್ಯ ಕಂಡು ಬರುತ್ತಿವೆ.
ಕೊರೊನಾ ಸೋಂಕಿನ ಪರಿಣಾಮ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಕೊರೊನಾ 2ನೇ ಅಲೆಯ ಆತಂಕ ಸೃಷ್ಟಿಯಾಗಿದ್ದು, ಸರ್ಕಾರ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆದ್ರೆ ಜಿಲ್ಲೆಯ ಮಸ್ಕಿ ವಿಧಾನಸಭಾ ಉಪಚುನಾವಣೆ ಕದನದಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ.
ಹೆಚ್ಚು ಜನ ಸೇರುವ ಸಿನಿಮಾ ಥಿಯೇಟರ್, ಜಾತ್ರೆ ಸೇರಿದಂತೆ ಹೆಚ್ಚಾಗಿ ಸೋಂಕಿನ ವರದಿಗಳು ಬರುತ್ತಿರುವ ಜಿಲ್ಲೆಗಳಲ್ಲಿ ಕೊರೊನಾ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದ್ರೆ ಮಸ್ಕಿ ಉಪಸಮರದಲ್ಲಿ ಈ ನಿಯಮಗಳನ್ನ ಗಾಳಿಗೆ ತೂರುವ ಮೂಲಕ ಅಬ್ಬರದ ಪ್ರಚಾರ ನಡೆಸಲಾಗುತ್ತದೆ.
ಕಾಂಗ್ರೆಸ್ - ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಕ್ಷೇತ್ರದಾದ್ಯಂತ ಆಯಾ ಪಕ್ಷದ ಮುಖಂಡರು ನಿತ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ ಗುಂಪು ಗುಂಪಾಗಿ ಹೋಗುತ್ತಿರುವುದು, ಜನರನ್ನ ಒಂದು ಕಡೆ ಸೇರಿ ಸಭೆಗಳನ್ನ ಮಾಡುವಂತಹ ಕೆಲಸವನ್ನ ಆಯಾ ಪಕ್ಷದ ಮುಖಂಡರು ಮಾಡುತ್ತಿದ್ದಾರೆ.
ಪ್ರಚಾರದ ನಡುವೆ ಕಡ್ಡಾಯವಾಗಿ ಪರಸ್ಪರ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ. ಆದ್ರೆ ಕೆಲವರು ಪಾಲನೆ ಮಾಡಿದ್ರೆ, ಬಹುತೇಕರು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವುದೇ ಇರುವುದು ಸಹ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸದ್ಯ ಕೋವಿಡ್ 2ನೇ ಅಲೆ ಭೀತಿಯ ನಡುವೆಯೂ ಮಸ್ಕಿ ವಿಧಾನಸಭೆ ಬೈ ಎಲೆಕ್ಷನ್ಗೆ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಇದು ಜಿಲ್ಲೆಯ ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.