ರಾಯಚೂರು: ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಬಹಿರಂಗ ಪ್ರಚಾರ ಏಪ್ರಿಲ್ 15ರಂದು ಮುಕ್ತಾಯವಾಗಿದೆ. ಇನ್ನು ಕೋವಿಡ್ ನಿಯಮಗಳ ಪ್ರಕಾರ ಮನೆ ಮನೆ ಪ್ರಚಾರ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹೇಳಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.15 ಸಂಜೆ 7 ಗಂಟೆಯ ಬಳಿಕ ಕ್ಷೇತ್ರದವರಲ್ಲದವರು ಕ್ಷೇತ್ರ ಬಿಟ್ಟು ಹೋಗಬೇಕು. ಚುನಾವಣೆ ನೀತಿ ಸಂಹಿತೆ ಜಾರಿ ಬಳಿಕ ಇದುವರೆಗೆ 60 ದೂರು ದಾಖಲಾಗಿವೆ. 46 ಕೋವಿಡ್ ಪ್ರಕರಣ, 14 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಾಗಿವೆ. ಇದರಲ್ಲಿ 7 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದುವರೆಗೆ 3.50 ಲಕ್ಷ ಮೌಲ್ಯದ ವಸ್ತು ಹಾಗೂ 1.33 ಲಕ್ಷ ಮೌಲ್ಯದ 355 ಲೀ. ಮದ್ಯ ಜಪ್ತಿ ಮಾಡಲಾಗಿದೆ. ಕೋವಿಡ್ ಸೋಂಕಿತರು ಮತ್ತು ಸಂಪರ್ಕಿತರು ಸಂಜೆ 6 ರಿಂದ 7 ಗಂಟೆ ವರೆಗೆ ಮತದಾನ ಮಾಡಲು ಸಮಯ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲರಿಗೆ ಕೊರೊನಾ ಸೋಂಕು ಬಾಧಿಸಿದ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕಿತ 18 ಜನರ ವರದಿ ಇನ್ನಷ್ಟೇ ಬರಬೇಕಾಗಿದೆ. ಪ್ರಾಥಮಿಕ ಸಂಪರ್ಕಿತರು ಸಂಜೆ 6 ರಿಂದ 7 ಕ್ಕೆ ಮತದಾನ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್ ಮಾತನಾಡಿ, ಕ್ಷೇತ್ರದಲ್ಲಿ ಒಟ್ಟು 62 ಸೂಕ್ಷ್ಮ, 07 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ 739 ಪೊಲೀಸ್ ಕಾನ್ಸ್ಟೇಬಲ್, 71 ಎಎಸ್ಐ, 25 ಪಿಎಸ್ಐ, 07 ಸಿಪಿಐ, 03 ಡಿಎಸ್ಪಿ, 1 ಸಿಆರ್ಪಿಎಫ್ ಮತ್ತು ಒಂದು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಇದುವರೆಗೂ 7 ಐಪಿಸಿ ಪ್ರಕರಣ ದಾಖಲಾಗಿದ್ದು, 18 ಜನರನ್ನು ಬಂಧಿಸಲಾಗಿದೆ. ಹಣ ಹಂಚಿಕೆ ವೈರಲ್ ಆದ ಬಗ್ಗೆ ವಿಡಿಯೋದಲ್ಲಿ ಕಂಡು ಬಂದ ಎಲ್ಲ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಉಪಚುನಾವಣೆ ಮತದಾನದ ಬಳಿಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ ಕಾಂಗ್ರೆಸ್!