ರಾಯಚೂರು: ಯುವನಕೋರ್ವನ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕು ಗೌಡನಕೆರೆದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಲಕ್ಷ್ಮಿಗೆ ಈಗಾಗಲೇ ಮದುವೆ ಆಗಿ 8 ತಿಂಗಳ ಮಗುವಿದ್ದರೂ ಕೂಡಾ ಅದೇ ಗ್ರಾಮದ ಯುವಕ ನಂದಪ್ಪ ತಿಮ್ಮಯ್ಯ ಎಂಬಾತ ಆಕೆಯನ್ನು ಚುಡಾಯಿಸುತ್ತಾ ಕೀಟಲೆ ಮಾಡುತ್ತಿದ್ದ ಎನ್ನಲಾಗಿದೆ. ಗ್ರಾಮದ ಹಿರಿಯರು ಎಷ್ಟೇ ಬುದ್ಧಿ ಹೇಳಿದರೂ ಕ್ಯಾರೆ ಎನ್ನದ ಈ ಯುವಕ ತನ್ನ ಕೀಟಲೆ ಮುಂದುವರೆಸಿದ್ದ. ಈ ಕಾರಣ ಮನನೊಂದ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಂದೆ ಕರಿಯಪ್ಪ ಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪಿಎಸ್ಐ ಮುದ್ದುರಂಗಸ್ವಾಮಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಚಾಮರಾಜ ಪಾಟೀಲ್, ಡಿವೈಎಸ್ಪಿ ಎಸ್.ಎಸ್. ಹುಲ್ಲೂರು, ಸಿಪಿಐ ಯಸವಂತ ಬಿಸನಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ.