ರಾಯಚೂರು : ಜಿಲ್ಲೆಯ ಏಮ್ಸ್ ಸ್ಥಾಪನೆಗಾಗಿ 308 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಗರದ ಜಿಲ್ಲಾ ಕ್ರೀಡಾಂಗಣ ಮಹಾತ್ಮಗಾಂಧಿ ಪುತ್ಥಳಿ ಮುಂಭಾಗದಲ್ಲಿ ಏಮ್ಸ್ ಸ್ಥಾಪನೆ ಹೋರಾಟ ಸಮಿತಿಯಿಂದ ನಿರಂತರವಾಗಿ ನಡೆದ ಧರಣಿ ಸತ್ಯಾಗ್ರಹ ಹೋರಾಟವನ್ನು ಕಳೆದ 308 ದಿನಗಳಿಂದ ನಿರಂತರವಾಗಿ ನಡೆಸುತ್ತಿದ್ದಾರೆ. ಈ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುವ ನಿಟ್ಟಿನಲ್ಲಿ ಅವರು ಭಾಗವಹಿಸಿದರು.
ಹೋರಾಟದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಮ್ಸ್ ಹೋರಾಟ ಕಳೆದ 308 ದಿನಗಳಿಂದ ನಡೆಯುತ್ತಿದೆ. ಏಮ್ಸ್ಗಾಗಿ ಕೇಂದ್ರ ಸರ್ಕಾರಕ್ಕೂ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದರು.
ಹಸಿದವರಿಗೆ ಅನ್ನ ಕೊಟ್ರೆ ಅದು ಜೀರ್ಣವಾಗುತ್ತೆ: 308 ದಿನಗಳಿಂದ ಏಮ್ಸ್ಗಾಗಿ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಈ ವೇದಿಕೆ ಯಾವುದೇ ಪಕ್ಷದ ವೇದಿಕೆಯಲ್ಲ. ರಾಯಚೂರು ಜಿಲ್ಲೆ ಚಿನ್ನದ ನಾಡು, ಭತ್ತದ ಕಣಜ, ಎರಡು ನದಿಗಳ ಬೀಡಾಗಿದೆ. ಐಐಟಿ ಸಂಸ್ಥೆ ರಾಯಚೂರಿಗೆ ಬರಬೇಕಿತ್ತು, ಆದರೆ ವಂಚನೆಯಾಗಿದೆ. ಹಸಿದವರಿಗೆ ಅನ್ನ ಕೊಟ್ರೆ ಅದು ಜೀರ್ಣವಾಗುತ್ತೆ. ಹಸಿಯದೇ ಇದ್ದವರಿಗೆ ಅನ್ನ ಕೊಟ್ರೆ ಅದು ಅಜೀರ್ಣವಾಗುತ್ತೆ ಎನ್ನುವ ಮೂಲಕ ಅಭಿವೃದ್ಧಿ ಹೊಂದಿರುವ ಧಾರವಾಡಕ್ಕೆ ಏಮ್ಸ್ ನೀಡಬಾರದೆಂದು ಪರೋಕ್ಷವಾಗಿ ಶ್ರೀಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಳಿ ಹೇಳಿದರು.
ಏಮ್ಸ್ ಸಿಕ್ಕೇ ಸಿಗುತ್ತದೆ ಎಂದ ಶ್ರೀಗಳು: ನಮಗೆ ಏಮ್ಸ್ ಬೇಕೇ ವಿನಃ ಏಮ್ಸ್ ಮಾದರಿ ಬೇಡ. ಶಾಂತಿಯುತ ಸಂಘಟನಾತ್ಮಕ ಹೋರಾಟ ಮುಂದುವರೆಯಲಿ. ನಮಗೆ ಭರವಸೆ ಇದೆ. ಏಮ್ಸ್ ಸಿಕ್ಕೇ ಸಿಗುತ್ತದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.
ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆಗೆ ಹೋರಾಟ ಸಮಿತಿ ಆಕ್ರೋಶ: ಇನ್ನೊಂದೆಡೆ ರಾಜ್ಯ ಬಜೆಟ್ನಲ್ಲಿ ಜಿಲ್ಲೆಗೆ ಏಮ್ಸ್ ಘೋಷಣೆ ಮಾಡದೇ ಏಮ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದ ಘೋಷಣೆ ಮಾಡಿರುವುದನ್ನು ಖಂಡಿಸಿ ಏಮ್ಸ್ ಸ್ಥಾಪನೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿತ್ತು.
ಈ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಬಸವರಾಜ ಕಳಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2023-24ನೇ ಸಾಲಿನ ಆಯವ್ಯಯದಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದು ಖಂಡನೀಯ. ಕಳೆದ 281 ದಿನಗಳಿಂದ ನಿರಂತರವಾಗಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗೆ ಹೋರಾಟ ನಡೆಯುತ್ತಿದೆ. ಸುದೀರ್ಘ ಹೋರಾಟಕ್ಕೆ ಬೆಲೆ, ಗೌರವ ಸಿಕ್ಕಿಲ್ಲ ಎಂದಿದ್ದರು.
ಮಾದರಿ ಏಮ್ಸ್ ನಿರ್ಮಾಣ ಮಾಡಿ ಹೋರಾಟ ಸಮಿತಿಯನ್ನು ಶಾಂತಗೊಳಿಸಿ ಬಳಿಕ ಏಮ್ಸ್ ಅನ್ನು ಧಾರವಾಡಕ್ಕೆ ಕೊಂಡೊಯ್ಯುವ ಹುನ್ನಾರ ನಡೆದಿದೆ. ಈ ಹಿಂದೆ ಜಿಲ್ಲೆಗೆ ಬರಬೇಕಿದ್ದ ಐಐಟಿಯನ್ನು ಧಾರವಾಡಕ್ಕೆ ಕೊಂಡೊಯ್ಯಲಾಯಿತು. ಹೀಗಾಗಿ, ಇದೊಂದು ಅವೈಜ್ಞಾನಿಕ ಬಜೆಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಏಮ್ಸ್ ಬರುವವರೆಗೂ ಹೋರಾಟ ಮುಂದುವರೆಯಲಿದೆ, ಜೀವ ಕೊಟ್ಟೇವು ಆದರೆ ಏಮ್ಸ್ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ರಾಯಚೂರಿಗೆ ಏಮ್ಸ್ ಮಾದರಿ ಆಸ್ಪತ್ರೆ ಘೋಷಣೆ: ಹೋರಾಟ ಸಮಿತಿ ಆಕ್ರೋಶ