ರಾಯಚೂರು: ಜಿಲ್ಲೆ ಲಿಂಗಸುಗೂರು ತಾಲೂಕಿಗೆ ಉದ್ಯೋಗ ಅರಸಿ ಮಧ್ಯಪ್ರದೇಶದಿಂದ ಗುಳೆ ಬಂದ ಕಾರ್ಮಿಕರಿಗೆ ವಾಪಸಾಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.
ತಾಲೂಕಿನ ಮುದಗಲ್ಲ, ಮಸ್ಕಿ, ರೋಡಲಬಂಡ ಗಡಿ ಭಾಗದಲ್ಲಿ ಹೆಚ್ಚು ಕಾರ್ಮಿಕರು ಇದ್ದು, ಎಲ್ಲರೂ ಕೊರೊನಾ ಸೋಂಕಿನ ಭೀತಿಯಲ್ಲಿ ದಿನದೂಡುತ್ತಿದ್ದಾರೆ. ಇತ್ತ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಹೋಗುವ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಸದೇ, ತಮ್ಮ ಗಡಿ ದಾಟಿದರೆ ಸಾಕು ಎಂದು ಅಧಿಕಾರಿಗಳು ತಪ್ಪು ಮಾಹಿತಿ ನೀಡಿ, ಕಳುಹಿಸುತ್ತಿದ್ದಾರೆ ಎಂದು ಕಾರ್ಮಿಕರು ದೂರಿದರು.
ತಾಲೂಕಿನ ರೋಡಲಬಂಡಕ್ಕೆ ಆಗಮಿಸಿದ ಕಾರ್ಮಿಕರ ಗುಂಪೊಂದು ರಕ್ಷಣೆ ನೀಡುವಂತೆ ಘೋಷಣೆ ಕೂಗುತ್ತಿದ್ದರು. ಇನ್ನೂ ಸ್ಥಳೀಯರು ಊಟ, ಉಪಹಾರ ನೀಡಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸದ ಆಡಳಿತ ಅಧಿಕಾರಿಗಳು ತಮ್ಮ ವ್ಯಾಪ್ತಿಯಿಂದ ಬೇರೆಡೆ ಸಾಗಿಸಲು ಯತ್ನಿಸಿದ್ದಾರೆ. ಕೂಡಲೇ ಅವರಿಗೆ ನೇರವಾಗಿ ಮಧ್ಯಪ್ರದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಕೆಲವರು ಅಧಿಕಾರಿಗೆ ಒತ್ತಾಯಿಸಿದರು.