ರಾಯಚೂರು : ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಗುತ್ತಿದ್ದು, ನಗರದಲ್ಲಿ ಕಿಟ್ಗಾಗಿ ಕಾರ್ಮಿಕರು ಮಕ್ಕಳೊಂದಿಗೆ ಕಾದು ಕುಳಿತ್ತಿದ್ದ ದೃಶ್ಯ ಕಂಡು ಬಂತು.
ನಗರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಆಹಾರ ಕಿಟ್ ವಿತರಣೆ ಮಾಡಲಾಗುವುದು ಎಂದು ಕಾರ್ಮಿಕರಿಗೆ ಮಾಹಿತಿ ನೀಡಲಾಗಿತ್ತು. ಹೀಗಾಗಿ, ನೂರಾರು ಕಾರ್ಮಿಕರು ಬೆಳ್ಳಂಬೆಳಗ್ಗೆ ತಮ್ಮ ಮಕ್ಕಳೊಂದಿಗೆ ವಸತಿ ನಿಲಯದ ಮುಂದೆ ನಿಂತಿದ್ದರು.
ಕಾರ್ಮಿಕ ಇಲಾಖೆಯಿಂದ ಮಧ್ಯಾಹ್ನ 3.30ರ ನಂತರದಲ್ಲಿ ಕಿಟ್ ವಿತರಣೆ ಮಾಡುವುದಾಗಿ ಸೂಚನೆ ನೀಡಲಾಗಿದೆ. ಆದರೆ, ಕಾರ್ಮಿಕರು ಮಾತ್ರ ಮುಂಜಾನೆಯಿಂದಲೇ ಕಾಯುತ್ತಾ ಕುಳಿತಿದ್ದಾರೆ. ದಿನಗೂಲಿ ಮಾಡಿ ಬದುಕುವ ಇವರು, ಕಿಟ್ ಪಡೆದುಕೊಳ್ಳುವುದಕ್ಕಾಗಿ ಒಂದು ದಿನದ ಕೆಲಸ ಕಳೆದುಕೊಂಡಿದ್ದಾರೆ.
ಓದಿ : ಕೊರೊನಾದಿಂದ ಮೃತರಾದವರ ಕುಟುಂಬಕ್ಕೆ ಸರ್ಕಾರದ ಪರಿಹಾರ ಮರೀಚಿಕೆ?
ಈ ಹಿಂದೆಯೂ ಕಿಟ್ ಕೊಡುತ್ತೇವೆ ಬನ್ನಿ ಅಂತಾ ಹೇಳಿಯೂ ಕೊಟ್ಟಿರಲಿಲ್ಲ. ಇವತ್ತೂ ಕೊಡ್ತೀವಿ ಎಂದು ಹೇಳಿದ್ದಾರೆ. ಆದರೆ, ಇಲ್ಲಿ ಒಬ್ರೂ ಅಧಿಕಾರಿಗಳು ಇಲ್ಲ. ನಾವು ಬಡವರು ಸರ್ ಏನ್ ಮಾಡ್ಲಿ.. ಮಕ್ಕಳನ್ನು ಕರೆದುಕೊಂಡು ಬಂದು ಮುಂಜಾನೆಯಿಂದ ಕಾಯುತ್ತಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.