ರಾಯಚೂರು: ಕೊರೊನಾ ವೈರಸ್ ಮನುಕುಲವನ್ನು ಕಾಡುತ್ತಿದ್ದರೆ, ಚರ್ಮಗಂಟು ರೋಗ ಪ್ರಾಣಿಗಳನ್ನು ಕಾಡಲಾಂಭಿಸಿದೆ. ಸೋಂಕಿನ ಮೇಲೆ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿವೆ. ಎತ್ತು, ಎಮ್ಮೆ ಸೇರಿದಂತೆ ಇತರ ಪ್ರಾಣಿಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗದಿಂದ ರೈತ ಸಮೂದಾಯ ಚಿಂತೆಗೀಡಾಗಿದೆ.
ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಭಾಗ ಈಗಾಗಲೇ ಕೊರೊನಾದಿಂದ ತತ್ತರಿಸಿದ್ದು, ಈ ನಡುವೆ ಇದೀಗ ದನ, ಎಮ್ಮೆ, ಆಕಳು, ಎತ್ತುಗಳಲ್ಲಿ ಚರ್ಮಗಂಟು (ಲಂಪಿ ಸ್ಕೀನ್ ಡಿಸೀಸ್) ಎಂಬ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದೆ. ಸೋಂಕಿಗೆ ತುತ್ತಾಗುತ್ತಿರುವ ಜಾನುವಾರುಗಳ ಸ್ಥಿತಿ ಕಂಡ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕ್ಯಾಪ್ರಿಫಾಕ್ಸ್ (ಫಾಕ್ಸ್ ವಿರೀಡೆ) ಎಂಬ ವೈರಣುವಿನಿಂದ ಈ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದ್ದು, ದನ, ಎಮ್ಮೆ ಜತೆಗೆ ಮಿಶ್ರತಳಿ ರಾಸುಗಳಲ್ಲಿ ಹಾಗೂ ಕರುಗಳಲ್ಲಿ ಈ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
ಲಂಪಿ ಸ್ಕೀನ್ ಡಿಸೀಸ್ ರಾಜ್ಯದ ಎಲ್ಲ ಕಡೆ ಹರಡಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ರಾಯಚೂರು ಜಿಲ್ಲೆಯೊಂದರಲ್ಲಿಯೇ 24 ಸಾವಿರಕ್ಕೂ ಹೆಚ್ಚು ಜಾನುವಾರುಗಳಿಗೆ ಈ ವೈರಸ್ ಹರಡಿದೆ. ಪಶು ಜನಗಣತಿ ಆಧಾರದ ಮೇಲೆ ಜಿಲ್ಲೆಯ 2.45 ಲಕ್ಷ ದನಗಳು, 1.12 ಎಮ್ಮೆಗಳಾಗಿವೆ.
ಈ ಜಾನುವಾರುಗಳಲ್ಲಿ ಈಗಾಗಲೇ 24 ಸಾವಿರ ಹೆಚ್ಚು ಲಂಪಿ ಸ್ಕೀನ್ ಡಿಸೀಸ್ ಕಂಡು ಬಂದಿದ್ದು, ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಪಶು ಇಲಾಖೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಕರುವೊಂದು ಮೃತಪಟ್ಟಿದೆ. ಜಿಲ್ಲೆಯ 107 ಪಶು ಚಿಕಿತ್ಸೆ ಕೇಂದ್ರಗಳಿದ್ದು, ಸಿಬ್ಬಂದಿ, ವೈದ್ಯರ ಕೊರತೆ ಇದೆ. ಇಂತಹ ಸಮಸ್ಯೆಗಳ ನಡುವೆ ಪಶುಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ರೈತರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಅಂತಾರೆ ಇಲ್ಲಿನ ಪಶು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಶಿವಣ್ಣ.
ಹಾಲು ಇಳುವರಿ ಕಡಿತ:
ಕೊರೊನಾ ವೈರಸ್ ದೇಶದ ಆರ್ಥಿಕತೆಯನ್ನ ಅಲುಗಾಡಿಸಿದರೆ, ಲಂಪಿ ಸ್ಕೀನ್ ಡಿಸೀಸ್ ಎಮ್ಮೆಗಳ ಹಾಲು ಇಳುವರಿ ಪ್ರಮಾಣವನ್ನು ಕುಗ್ಗಿಸುತ್ತೆ. ಕಾಯಿಲೆ ಹರಡಿದ ರಾಸುಗಳು ಕಡಿಮೆ ಪ್ರಮಾಣದ ಆಹಾರ ಸ್ವೀಕರಿಸುತ್ತವೆ. ಹೀಗಾಗಿ ಹಾಲಿನ ಇಳವರಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಪಶು ಇಲಾಖೆ ವೈದ್ಯರು.
ರೋಗದ ಲಕ್ಷಣಗಳು:
ಲಂಪಿ ಸ್ಕೀನ್ ತಗುಲಿದ ಜಾನುವಾರುಗಳಿಗೆ 105 ರಿಂದ 108 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ಅತಿಯಾದ ಜ್ವರ ಬರುತ್ತದೆ. ಕಣ್ಣುಗಳಿಂದ ನೀರು ಸೋರುವುದು, ಶಕ್ತಿ ಹೀನತೆ, ಕಾಲುಗಳಲ್ಲಿ ಬಾವು, ಕುಂಟುವುದು, ಚರ್ಮದ ಮೇಲೆ ವ್ಯತ್ಯಾಸ, ಗುಳ್ಳೆ ಕಾಣಿಸಿಕೊಂಡು ಒಡೆಯುವುದು, ಹಾಲಿನ ಇಳುವರಿ ಕೊರತೆ ಜೊತೆಗೆ ಗರ್ಭಪಾತವಾಗುವ ಸಾಧ್ಯತೆ ಸಹ ಹೆಚ್ಚು. ಎತ್ತುಗಳಲ್ಲಿ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು. ಮಿಶ್ರತಳಿ ಜರ್ಸಿ, ಹೆಚ್.ಎಫ್. ರಾಸುಗಳು ಈ ರೋಗದಿಂದ ಹೆಚ್ಚಾಗಿ ಬಳಲುತ್ತಿರುವುದರಿಂದ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರೋಗ ಹೇಗೆ ಹರಡುತ್ತಿದೆ:
ಸೊಳ್ಳೆ, ಉಣ್ಣೆ, ನೊಣ ಹಾಗೂ ನಾನಾ ಕೀಟಗಳಿಂದ, ಕಲುಷಿತಗೊಂಡ ನೀರು, ಆಹಾರದಿಂದ ಹಾಗೂ ಜಾನುವಾರಗಳ ನೇರ ಸಂಪರ್ಕದಿಂದ ಈ ಸೋಂಕು ಹರುಡುತ್ತಿದೆ. ಸದ್ಯ ರೋಗ ಹರಡುವಿಕೆ ಪ್ರಮಾಣ ಶೇ.10-20 ರಷ್ಟಿದ್ದರೆ ರೋಗದ ಸಾವಿನ ಪ್ರಮಾಣ ಶೇ.1-5 ರಷ್ಟಿದೆ.
ಚಿಕಿತ್ಸೆ ವಿಧಾನ:
ಲಂಪಿ ಸ್ಕೀನ್ ಕಂಡು ಬಂದ ಜಾನುವಾರುಗಳ ದೇಹವನ್ನ ತಂಪಾಗಿರುವಂತೆ ಮಾಡಬೇಕು, ಹಾಗಾಗಿ ಅವುಗಳ ಮೈಮೇಲೆ ಹಸಿ ಬಟ್ಟೆ ಹಾಕಬೇಕು. ತಂಪಾದ ಜಾಗದಲ್ಲಿ ಕಟ್ಟಬೇಕು, ಚರ್ಮದ ಮೇಲಿನ ಗಾಯಗಳಿಗೆ ಪೊಟ್ಯಾಷಿಯಂ ಪರಮಾಂಗನೇಟ್ ದ್ರಾವಣದಿಂದ ತೊಳೆದು ಅಯೊಡಿನ್ ದ್ರಾವಣ, ಮುಲಾಮು, ಬೇವಿನ ಎಣ್ಣೆ ಲೇಪಿಸಬೇಕು, ರೋಗ ಹರಡುವುದನ್ನ ತಡೆಯಲು ರೋಗಗ್ರಸ್ಥ ಜಾನುವಾರುಗಳನ್ನ ಬೇರ್ಪಡಿಸಬೇಕು. ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು, ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು, ಅಡುಗೆ ಸೋಡಾ ಹಾಕಿ ದಿನಕ್ಕೆ ಐದಾರು ಬಾರಿ ಕುಡಿಸಬೇಕು, ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು, ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು.
ಇನ್ನು ಈ ಸಾಂಕ್ರಾಮಿಕ ಕಾಯಿಲೆಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಯಾಗಲಿ, ಲಸಿಕೆಯಾಗಿ ಇಲ್ಲ. ಪಶುವೈದ್ಯರು ರೋಗದ ಗುಣ-ಲಕ್ಷಣದ ಆಧಾರದ ಮೇಲೆ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ರೈತರು ಲಿಂಪಿ ಸ್ಕೀನ್ ಡಿಸೀಜ್ ತಗುಲಿದ ಜಾನುವಾರುಗಳೊಂದಿಗೆ ಪಶು ವೈದ್ಯರನ್ನ ಸಂಪರ್ಕಿಸಬೇಕು.