ರಾಯಚೂರು: ರಾಜ್ಯದಲ್ಲಿನ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕಳೆದ ಎರಡು ದಿನಗಳಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಯು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ ಬಿಜೆಪಿಯಿಂದ ಅಭ್ಯರ್ಥಿಯನ್ನ ಘೋಷಣೆ ಮಾಡದಿದ್ದರೂ, ಸಂಭಾವ್ಯ ಅಭ್ಯರ್ಥಿ ನಾಮಪತ್ರವನ್ನು ಸಾಂಕೇತಿಕವಾಗಿ ಸಲ್ಲಿಸಿದ್ದಾರೆ. ಆದರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದ ಜೆಡಿಎಸ್ ಇದೀಗ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಕಣಕ್ಕಿಳಿಸದಿರಲು ತೀರ್ಮಾನಿಸಿದೆ ಎನ್ನಲಾಗ್ತಿದೆ.
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ ನಡುವೆ ನೇರಾನೇರ ಪೈಪೋಟಿಯಿದ್ದು, ಗೆಲುವು ಸಾಧಿಸಲು ಕ್ಷೇತ್ರದಲ್ಲಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಪಕ್ಷ ಮಾತ್ರ ಬೈ ಎಲೆಕ್ಷನ್ ಬ್ಯಾಟಲ್ನಿಂದ ಹಿಂದೆ ಸರಿದುಕೊಂಡಿದೆ. ಚುನಾವಣೆ ಮೊದಲು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕೂಡ ಬೆಂಬಲಿಸಿದ್ರು. ಆದ್ರೆ ಇದಕ್ಕಿಂತ ಮಸ್ಕಿಗೆ ಜೆಡಿಎಸ್ನಿಂದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವುದಾಗಿ ಹೇಳಲಾಗಿತ್ತು. ಸದ್ಯ ಜೆಡಿಎಸ್ ಮಸ್ಕಿ ಉಪಚುನಾವಣೆಯ ಕಣದಿಂದ ಹಿಂದೆ ಸರಿದಿದೆ.
ಇದನ್ನೂ ಓದಿ: ಬದಲಾದ ತೀರ್ಮಾನ: ಮಸ್ಕಿ ಉಪಚುನಾವಣೆಗೆ ಜೆಡಿಎಸ್ ಸ್ಪರ್ಧೆ?
ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ಕಾಣುತ್ತಿದೆ. ಜೆಡಿಎಸ್ನಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳಿದಿದ್ದರೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದ್ರೆ ಅಂತಹ ಪ್ರಭಾವಿ ಅಭ್ಯರ್ಥಿಯ ಕೊರತೆಯಿಂದಾಗಿ ಜೆಡಿಎಸ್ ಉಪಚುನಾವಣಾ ಕಣದಿಂದ ಹಿಂದೆ ಸರಿದಿದೆ ಎನ್ನಲಾಗ್ತಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆಯಿಂದ ತೆರವಾದ ಮಸ್ಕಿ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಭರ್ಜರಿ ಸಿದ್ದತೆ ನಡೆಸುತ್ತಿವೆ. ಇತ್ತ ಜೆಡಿಎಸ್ ತಟಸ್ಥ ನೀತಿ ಅನುಸರಿಸಿ ಮಸ್ಕಿ ಉಪಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ಮುಖಂಡರು ಸ್ಪಷ್ಟನೆ ನೀಡಿದ್ದಾರೆ.