ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕೆಲವೆಡೆ ಅವ್ಯಾಹತವಾಗಿದ್ದ ಅಕ್ರಮ ಮರಳು ದಂಧೆ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 35 ಲಕ್ಷ ರೂ ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.
ಮಾನ್ವಿ ತಾಲೂಕಿನ ರಾಜೊಳ್ಳಿ ಹಾಗೂ ಜೂಕೂರು ಗ್ರಾಮದ ವಿವಿಧೆಡೆ ಅಕ್ರಮ ಮರಳು ಸಂಗ್ರಹಿಸಿದ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 35,70,000 ಮೌಲ್ಯದ 7,000 ಮೆಟ್ರಿಕ್ ಟನ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಜಿಲ್ಲೆಯಲ್ಲಿ ಹರಿಯುವ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ತಂದು ಹೊಲಗಳಲ್ಲಿ ಮಾರಾಟ ಮಾಡುವಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.
ಮಾನ್ವಿಯ ಪಿಎಸ್ಐ ರಂಗಪ್ಪ ದೊಡ್ಡಮನಿ, ಭೂ ವಿಜ್ಞಾನಿಗಳ ತಂಡ, ತಹಶೀಲ್ದಾರ್ ಒಳಗೊಂಡ ತಂಡದಿಂದ ರಾಜೊಳ್ಳಿ ಗ್ರಾಮದ ವಿವಿಧ 13 ಕಡೆ ದಾಳಿ ಮಾಡಿ 4,850 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿಕೊಂಡಿದ್ದಾರೆ. ಅಲ್ಲದೇ ಜುಕೂರು ಗ್ರಾಮದ 2 ಕಡೆ ದಾಳಿ ಮಾಡಿ ಹೊಲಗಳಲ್ಲಿ ಸಂಗ್ರಹಿಸಿಟ್ಟ 2,150 ಮೆಟ್ರಿಕ್ ಟನ್ ಮರಳು (10,96,500) ರೂ.ಮೌಲ್ಯದ ಮರಳು ವಶಪಡಿಸಿಕೊಂಡಿದ್ದಾರೆ.