ಲಿಂಗಸುಗೂರು: ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹದಿನೈದು ದಿನಗಳಿಂದ ಆಗಾಗ ಸುರಿವ ಮಳೆಯಿಂದ ಜನತೆ ರೋಸಿ ಹೋಗಿದ್ದರು. ಬೆಳೆ ಕೊಳೆತು ನಾರುತ್ತಿದ್ದು, ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಹತ್ತಿ, ತೊಗರಿ ಸೇರಿದಂತೆ ಪ್ರಮುಖ ಬೆಳೆಗಳು ರೋಗಕ್ಕೆ ತುತ್ತಾಗಿ ರೈತರನ್ನು ಕಂಗೆಡಿಸಿದೆ. ಅದರಲ್ಲೂ ಎರಡು ದಿನಗಳಿಂದ ಅಹೋರಾತ್ರಿ ಸುರಿದ ಧಾರಾಕಾರ ಮಳೆಗೆ ಅಳಿದುಳಿದ ಬೆಳೆ ಹಾಳಾಗುವ ಜೊತೆಗೆ ಮನೆ, ಜೋಪಡಿ ಕುಸಿಯುತ್ತಿವೆ. ರೈತರು, ಸಾಮಾನ್ಯ ಜನತೆ ಪರದಾಟ ನಡೆಸಿದ್ದು, ಸರ್ಕಾರ ನೆರವಿಗೆ ಬರಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಅತಿಯಾದ ಮಳೆಯಿಂದ ಹಾಲಭಾವಿ ಪರಿಶಿಷ್ಟರ ಕಾಲೋನಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶ ಕಾಲೋನಿಗಳು ಜಲಾವೃತಗೊಂಡಿವೆ. ಇನ್ನು ಮುದಗಲ್ಲ ಪಟ್ಟಣದ ಸೋಮವಾರಪೇಟೆ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಕೋಡಿ ಬಿದ್ದು ಹರಿವ ನೀರಿಗೆ ಅದರ ಮುಂದಿರುವ ಮನೆಗಳು ಜಲಾವೃತಗೊಂಡು ಅಪಾಯಕ್ಕೆ ಸಿಲುಕಿದ್ದರು. ಆಗ ಭಗತ್ ಸಿಂಗ್ ಅಭಿಮಾನಿ ಬಳಗ, ಪುರಸಭೆ ಸದಸ್ಯರು ಮನೆಯಲ್ಲಿರುವ ಮಹಿಳೆಯರು, ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆ ತಂದಿರುವ ಘಟನೆ ಜರುಗಿದೆ.