ರಾಯಚೂರು: ನೆರೆ ಬರ ಅತಿವೃಷ್ಟಿ ನಿರ್ವಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಸರ್ಕಾರದ ವಿವಿಧ ಯೋಜನೆಯಲ್ಲಿ ರೈತರಿಗೆ ಬರಬೇಕಾಗಿರುವ ಒಂದು ವಾರದಲ್ಲಿ ಹಣ ಪಾವತಿಸದಿದ್ದಲ್ಲಿ, ಸರ್ಕಾರಗಳು ದಿವಾಳಿಯಾಗಿವೆ ಭಿಕ್ಷಾಟನೆ ಮಾಡಿ ಹಣ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ 16 ಜಿಲ್ಲೆಗಳಲ್ಲಿ ಅತಿವೃಷ್ಟಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ರೈತರು ಸಂಪೂರ್ಣವಾಗಿ ಬೀದಿಗೆ ಬರುವಂತಾಗಿದ್ದು, ರೈತ, ಕೃಷಿ ಕ್ಷೇತ್ರ ಅಪಾಯದಲ್ಲಿದ್ದು, ಬೆಂಬಲ ಬೆಲೆಯಲ್ಲಿ ಧಾನ್ಯಗಳ ಖರೀದಿಯಾಗುತ್ತಿಲ್ಲ. ಸರ್ಕಾರ ಎನ್ಡಿಆರ್ಎಫ್ ಪ್ರಕಾರ ರೈತರಿಗೆ ಪರಿಹಾರ ನೀಡುವುದಾಗಿ ಹೇಳುತ್ತಿದೆ. ಆದರೆ ಈ ಪರಿಹಾರ ರೈತರು ಬೆಳೆಗಳಿಗೆ ಹಾಕಿದ ಖರ್ಚು ಕೂಡಾ ಬರುದಿಲ್ಲ ಎಂದರು.
ಅತಿವೃಷ್ಟಿ ಹಾನಿ ಪರಿಹಾರ ಕುರಿತು ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರು, ಮುಖ್ಯಮಂತ್ರಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿಲ್ಲ. ಕಂದಾಯ ಸಚಿವರು ಕಾಟಾಚಾರದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ರೈತರಿಗೆ ಬರಬೇಕಾಗಿರುವ ಬಾಕಿ ಹಣ ಪಾವತಿಗೆ ಒಂದು ವಾರ ಗಡುವು ಸರ್ಕಾರಕ್ಕೆ ನೀಡುತ್ತಿದ್ದು, ಒಂದು ವೇಳೆ ಪಾವತಿಸಲು ವಿಫಲವಾದಲ್ಲಿ ಸರ್ಕಾರಗಳು ಆರ್ಥಿಕ ದಿವಾಳಿಯಾಗಿದೆ ಎಂದು ಭಾವಿಸಿ ಅ.23 ರಂದು ನಗರದ ತೀನ್ ಖಂದಿಲ್ ವೃತ್ತದಲ್ಲಿ ರೈತ ಸಂಘದಿಂದ ಭಿಕ್ಷಾಟನೆ ನಡೆಸಿ ಬಂದ ಹಣವನ್ನು ಪ್ರಧಾನ ಮಂತ್ರಿ ಕಲ್ಯಾಣ ನಿಧಿಗೆ ಕಳುಹಿಸಲಾಗುವುದು ಎಂದರು.