ಲಿಂಗಸುಗೂರು: ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚಿನ ನೀರು ಬಿಡಲಾಗಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಗಡಿ ಭಾಗದ ಕೃಷ್ಣಾ ತಟದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ನಾರಾಯಣಪುರ ಅಣೆಕಟ್ಟೆಯಿಂದ ಭಾನುವಾರ ಸಂಜೆ 1,37,220 ಕ್ಯೂಸೆಕ್ ನೀರು ಬಿಟ್ಟಿದ್ದು, ಲಿಂಗಸುಗೂರು ತಾಲೂಕು ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಬ್ರಿಡ್ಜ್ ಮುಳುಗಡೆ ಸಾಧ್ಯತೆ ಹೆಚ್ಚಾಗಿದ್ದರಿಂದ ಸಾರಿಗೆ ಸಂಪರ್ಕವನ್ನು ಬಂದ್ ಮಾಡಲಾಗಿದೆ. ಕೃಷ್ಣಾ ಜಲಾನಯನ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಅಹೋರಾತ್ರಿ ಮಳೆ ಸುರಿಯುತ್ತಿದೆ. ಒಂದೆಡೆ ಮಳೆ, ಇನ್ನೊಂದೆಡೆ ಪ್ರವಾಹ ಭೀತಿಯಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಪ್ರವಾಹ ಹೆಚ್ಚಾಗುವ ಮುನ್ಸೂಚನೆ ಬಂದಿದ್ದರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.
ರಾಯಚೂರು ತಾಲೂಕು ಕೊಪ್ಪರ, ಹಿರೆರಾಯಕುಂಪಿ, ಕೊಂಚಂಪಾಳೆ ಸೇರಿದಂತೆ ದೇವದುರ್ಗ, ಲಿಂಗಸುಗೂರು ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಸಾರುತ್ತಿರುವುದು ಕಂಡು ಬಂದಿದೆ. ಮುಂಜಾಗೃತ ಕ್ರಮವಾಗಿ ರಾಯಚೂರು ತಹಶೀಲ್ದಾರ ನೇತೃತ್ವದಲ್ಲಿ ಎನ್.ಡಿ.ಆರ್.ಎಫ್ ತಂಡ ರಾಯಚೂರು ತಾಲೂಕು ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮನಗೌಡ ನೇತೃತ್ವದ ತಂಡ ದೇವದುರ್ಗದ ಗೂಗಕ್ ಬ್ಯಾರೇಜ್ ಸೇರಿದಂತೆ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದೆ. ಲಿಂಗಸುಗೂರು ತಾಲೂಕಲ್ಲಿ ಕೂಡ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಡಿವೈಎಸ್ಪಿ ಹುಲ್ಲೂರು ತಂಡ ಮಿಂಚಿನ ಸಂಚಾರ ನಡೆಸಿ ಎಚ್ಚರಿಕೆ ನೀಡಿದ್ದು ಕಂಡು ಬಂದಿದೆ.