ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿಯ ಗುಂಡಲಬಂಡ ಜಲಪಾತ ವೀಕ್ಷಣೆಗೆ ತೆರಳಿದ್ದ ತಂದೆ-ಮಗ ನೀರು ಪಾಲಾದ ಘಟನೆ ಗುರುವಾರ ಸಂಜೆ ನಡೆದಿದೆ.
ಜಲಪಾತದ ನೀರಿನ ರಭಸಕ್ಕೆ ಕೊಚ್ಚಿ ಹೋದವರನ್ನು ರಾಯಚೂರಿನ ದೇವದುರ್ಗ ತಾಲೂಕಿನ ಕೃಷ್ಣಪ್ಪ ನಾಯಕ (35), ಧನುಷ್ (05) ಎಂದು ಗುರುತಿಸಲಾಗಿದೆ. ನೀರು ಪಾಲಾದವರ ಹುಡುಕಾಟ ಮುಂದುವರಿದಿದೆ.
ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಗುಂಡಲಬಂಡ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಹಿನ್ನೆಲೆ ಜಲಪಾತ ವೀಕ್ಷಣೆಗೆ ಬಂದಿದ್ದ ನಾಲ್ವರಲ್ಲಿ ತಂದೆ-ಮಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ.
ಸಿದ್ದಪ್ಪ ನಾಯಕ ಎಂಬಾತ ಈಜಿ ದಡ ಸೇರಿದ್ದಾರೆ. ಜಲಪಾತದ ನೀರಿನ ಮಧ್ಯೆ ಸಿಲುಕಿಕೊಂಡಿದ್ದ ಮಹಾಂತೇಶ ಎಂಬಾತನನ್ನು ಸ್ಥಳೀಯರ ಸಹಕಾರದಿಂದ ಪೊಲೀಸ್, ಅಗ್ನಿಶಾಮಕ ದಳದ ತಂಡ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಎಸ್.ಎಸ್ ಹುಲ್ಲೂರು, ಅಗ್ನಿಶಾಮಕ ಠಾಣಾಧಿಕಾರಿ ಮಾರ್ಕಂಡೇಯ ನೇತೃತ್ವದಲ್ಲಿ ಸ್ಥಳೀಯರು ನಾಪತ್ತೆಯಾದರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.