ರಾಯಚೂರು: ಇಲ್ಲಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿಯನ್ನ ವಿಚಾರಣೆ ನಡೆಸಿ ಕೋರ್ಟ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯು ಇಂದು ಆರೋಪಿಯನ್ನು ನಗರದ 3ನೇ ಜೆಎಂಎಫ್ಸಿ ಕೋರ್ಟ್ ಎದುರು ಹಾಜರುಪಡಿಸಿತು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನ ತನಿಖೆ ನಡೆಸುತ್ತಿದ್ದ ಸಿಐಡಿ, ಕೋರ್ಟ್ ಅನುಮತಿ ಮೆರೆಗೆ ವಶಕ್ಕೆ ಪಡೆದು ಆರೋಪಿಯನ್ನ 9 ದಿನಗಳ ವಿಚಾರಣೆ ನಡೆಸಿ, ಪುನಃ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಯ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಿಐಡಿಯು ತಮ್ಮ ವಶದಲ್ಲಿದ್ದ ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿತ್ತು. ಇದೀಗ ನ್ಯಾಯಲಯವು ಮೇ 14ರವರೆಗೆ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.
ಪ್ರಕರಣ ಹಸ್ತಾಂತರವಾಗುತ್ತಿದ್ದಂತೆ ಸಿಐಡಿ ತಂಡ ಏ.22ಕ್ಕೆ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ತಂಡದೊಂದಿಗೆ ಮೃತ ವಿದ್ಯಾರ್ಥಿನಿ ಸಾವಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ನಂತರ ವಿದ್ಯಾರ್ಥಿನಿ ತಂದೆ ತಾಯಿ ಸಂಬಂಧಿಕರೊಂದಿಗೆ ವಿಚಾರಣೆ ನಡೆಸಿದ ನಂತರ ನ್ಯಾಯಲಯಕ್ಕೆ ಆರೋಪಿಯನ್ನ ವಿಚಾರಣೆ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಿತ್ತು.
ವಿಚಾರಣೆಗಾಗಿ ಕೋರ್ಟ್ ಅನುಮತಿ ಪಡೆದು ಏ.24ಕ್ಕೆ ಆರೋಪಿ ಸುದರ್ಶನ ಯಾದವ್ ನನ್ನ ಸಿಐಡಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸುವ ಮೂಲಕ ಆರೋಪಿಯೊಂದಿಗೆ ಮೃತ ಸ್ಥಳಕ್ಕೆ ಹಾಗೂ ವಿದ್ಯಾರ್ಥಿನಿ ಓದುವ ಕಾಲೇಜು, ವಿದ್ಯಾರ್ಥಿನಿ ಮನೆ ಸುತ್ತಮುತ್ತ, ಆರೋಪಿ ಮನೆ ಸುತ್ತಮುತ್ತ ಕರೆದುಕೊಂಡು ಹೋಗಿ ಚಲನವಲನ ಮತ್ತು ಆತನ ಕುರಿತಾಗಿ ವಿಚಾರಣೆ ನಡೆಸುವುದಷ್ಟೆ ಅಲ್ಲದೇ ಕರ್ನೂಲ್, ಮಂತ್ರಾಲಯ, ಆದೋನಿ ಸೇರಿದಂತೆ ವಿವಿಧ ಕಡೆ ತನಿಖೆ ನಡೆಸಿದ್ದರು.
ರಾಯಚೂರು ಖಾಸಗಿ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಏ.13ಕ್ಕೆ ನಾಪತ್ತೆಯಾಗಿದ್ದರು. ಇವರ ಶವ ಏ.16ರಂದು ನಗರದ ಮಾಣಿಕಪ್ರಭು ದೇವಾಲಯದ ಹಿಂಬದಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಂತರ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಈಕೆಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂಬ ಶಂಕೆ ಎಲ್ಲಾ ಕಡೆ ಹರಡಿತು. ಇದರ ಆಧಾರದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಈಕೆ ವಿರುದ್ಧ ನೆಟ್ಟಿಗರು ಧ್ವನಿ ಎತ್ತಿದ್ದರು.
ಇದರ ಪರಿಣಾಮ ವಿದ್ಯಾರ್ಥಿನಿ ಸಾವಿನ ಪ್ರಕರಣ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಕೂಡಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಿಂದ ನಡೆಸುತ್ತಿದ್ದ ಪ್ರಕರಣವನ್ನ ಸಿಐಡಿಗೆ ವಹಿಸಲಾಗಿತ್ತು.