ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತ ಬೆನ್ನಲ್ಲೇ ಕೃತ್ಯವೆಸಗಿದ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು ಎನ್ನುವ ಬಲವಾದ ಕೂಗು ಕೇಳಿ ಬಂದಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ವಿದ್ಯಾರ್ಥಿನಿ ಮೇಲೆ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಏ. 13ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ನಗರದ ಐಡಿಎಂಎಸ್ ಲೇಔಟ್‌ನ ವಿದ್ಯಾರ್ಥಿನಿ ಬೈಕ್ನಲ್ಲಿ ತೆರಳಿದ್ದಾಳೆ. ಅಂದು ಮನೆಯಿಂದ ತೆರಳಿದ ಆಕೆ ಏ. 15ರ ಸಂಜೆ ವೇಳೆ ಮಾಣಿಕ್ಯ ಪ್ರಭು ದೇವಾಲಯದ ಹಿಂಬದಿಯ ಪಾಳು ಬಿದ್ದ ಹೊಲದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪರೀಕ್ಷೆಯಲ್ಲಿ ಪದೇ ಪದೆ ಫೇಲ್ ಆಗುವುದರಿಂದ ಮನನೊಂದು ಸಾವನ್ನಪ್ಪಿರುವುದಾಗಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತಾದರೂ, ಕೊಲೆ ಶಂಕೆ ವ್ಯಕ್ತವಾಗಿತ್ತು.
ನಿನ್ನೆ ಸಂಜೆ ವೇಳೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ತಾಯಿ ದೂರಿನ ಹಿನ್ನೆಲೆ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದ ಸುದರ್ಶನ ಯಾದವ್ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮರಣೋತ್ತರಣ ಪರೀಕ್ಷೆ ಮಾಡಲಾಗುತ್ತಿದೆ.
ಆರೋಪಿ ಸುದರ್ಶನ ಯಾದವ್ ಕಾಲೇಜಿಗೆ ಹೋಗುವಾಗ ತೊಂದರೆ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಬುದ್ಧಿ ಮಾತುಗಳನ್ನ ಹೇಳಲಾಗಿದೆ. ಆದರೂ ಸಹ ತೊಂದ್ರೆ ನೀಡುತ್ತಿದ್ದು, ಸುದರ್ಶನ ಅಷ್ಟೆ ಅಲ್ಲದೇ ಅವರ ಗ್ಯಾಂಗ್ ಈ ಕೃತ್ಯ ಎಸಗಿದೆ. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕೆಂದು ಪೋಷಕರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆ ಮುಖಂಡರು ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.