ರಾಯಚೂರು: ಜಿಲ್ಲೆಯಲ್ಲಿ ಹಲವಾರು ಕಂಪನಿಗಳು ತಮ್ಮ ಸ್ವ ಹಿತಾಸಕ್ತಿಗೆ ಪೈಪೋಟಿಗೆ ಬಿದ್ದು ಕಳಪೆ ರಸಗೊಬ್ಬರ, ಕೀಟನಾಶಕಗಳನ್ನು ಅನಧಿಕೃತವಾಗಿ ಮಾರಾಟ ಮಾಡುವ ಧಂದೆಯಲ್ಲಿ ತೊಡಗಿ ರೈತರ ಜೀವನದ ಜೊತೆ ಚೆಲ್ಲಾಟವಾಡ್ತಿವೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅಂಗವಾಗಿ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು ಇದನ್ನೇ ಬಂಡವಾಳವಾಗಿಸಿಕೊಂಡು ಅಮಾಯಕ ರೈತರನ್ನು ಯಾಮಾರಿಸುವ ಕಂಪನಿಗಳ ದಂಧೆಯೂ ಎಗ್ಗಿಲ್ಲದೆ ನಡೆಯುತ್ತಿದೆ. ಮಾರುಕಟ್ಟೆಯಲ್ಲಿ ಪರವಾನಗಿ ಇಲ್ಲದೇ ಮಾರಾಟ ಮಾಡುತ್ತಿರುವ ಜೈವಿಕ ಕೀಟನಾಶಕ ಹಾವಳಿ ಮಟ್ಟ ಹಾಕಲು ಕೃಷಿ ಇಲಾಖೆ ಮುಂದಾಗಿದೆ.
ಇತ್ತೀಚೆಗೆ ರಾಜ್ಯ ಕೃಷಿ ಇಲಾಖೆಯ ಜಾಗೃತಿ ಕೋಶದ ಅಪರ ನಿರ್ದೇಶಕ ಡಾ. ಅನೂಪ್, ಬೆಳಗಾವಿಯ ಜಾಗೃತಿ ಕೋಶ ಬೆಳಗಾವಿಯ ಜಂಟಿ ನಿರ್ದೇಶಕ ಶಿವನಗೌಡ ಹಾಗೂ ಕೃಷಿ ನಿರ್ದೇಶಕಿ ಡಾ. ಚೇತನಾ ಪಾಟೀಲ್ ನೇತೃತ್ವದ 35 ಪರಿವೀಕ್ಷಕರ ತಂಡ ದಢೀರ್ ದಾಳಿ ಮಾಡಿದೆ. ಆಂದೋಲನದ ಭಾಗವಾಗಿ ದಾಳಿ ನಡೆಸಿ 54 ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದಾಗ 86 ಜೈವಿಕ ಕೀಟನಾಶಕಗಳು ಪತ್ತೆಯಾಗಿದ್ದು, ಒಟ್ಟು 1576.45 ಲೀಟರ್ ಪ್ರಮಾಣದ ಕೃಷಿ ಪರಿಕರ ಮಾರಾಟವನ್ನು ತಡೆಗಟ್ಟಿದ್ದಾರೆ.
ಈ ಕುರಿತು ಬೆಂಗಳೂರಿನ ಕೃಷಿ ಇಲಾಖೆಯ ಜಾಗೃತ ಕೋಶ ಅಪರ ನಿರ್ದೇಶಕ ಡಾ. ಅನೂಪ್ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದರು. ರೈತರು ಯಾವುದೇ ಕೃಷಿ ಪರಿಕರ ಖರೀದಿಸುವಾಗ ಪರವಾನಗಿ ಪಡೆದ ಕಂಪನಿ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಖರೀದಿ ಮಾಡಬೇಕೆಂದು ಸಲಹೆ ನೀಡಿದರು.