ರಾಯಚೂರು: ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಭೀತಿಯ ನಡುವೆಯೇ ಮಕ್ಕಳಲ್ಲಿ ಮಹಾಮಾರಿ ಡೆಂಗ್ಯೂ ಕಾಣಿಸಿಕೊಂಡಿದೆ. 10 ವರ್ಷದೊಳಗಿನ ಮಕ್ಕಳು ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.
ಜಿಲ್ಲೆಯ ಈವರೆಗೆ ಐದಾರು ಮಕ್ಕಳು ಡೆಂಗ್ಯೂಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೂಡ ಡೆಂಗ್ಯೂ ಅಬ್ಬರಿಸುತ್ತಿದೆ. ಮಕ್ಕಳಿಗೆ ವಿಪರೀತ ಜ್ವರ, ಕೈ, ಕಾಲು ಬೆರಳು, ಮೈಯಲ್ಲಿ ಸಂಧಿಗಳಲ್ಲಿ ತುರಿಕೆ ಲಕ್ಷಣಗಳು ಕಂಡು ಬರುತ್ತಿವೆ. ಸದ್ಯ ಪೋಷಕರು ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳನ್ನ ದಾಖಲಿಸುತ್ತಿದ್ದಾರೆ.
ಡೆಂಗ್ಯೂ ಬಂದ ಮಕ್ಕಳಿಗೆ ಬ್ಲಡ್ ಪ್ಲೇಟ್ಲೆಟ್ ಗಳನ್ನು ಏರಿಸುವುದರ ಜತೆಯಲ್ಲಿ, ಇತರ ಎಲ್ಲಾ ರೀತಿಯ ಚಿಕಿತ್ಸೆ ನೀಡುತ್ತಿದ್ದೇವೆ. ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಮನೆ ಸುತ್ತಮುತ್ತ ನೀರು ನಿಲ್ಲದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಸತೀಶ್ ಬಿ.ಸಿ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೊಪ್ಪಳ: 16 ದಿನಗಳಲ್ಲಿ 17 ಡೆಂಗ್ಯೂ ಪ್ರಕರಣಗಳು ಪತ್ತೆ