ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ನಾಲ್ಕನೇ ಘಟಕವೂ ಸ್ಥಗಿತಗೊಂಡಿದೆ. ವಿದ್ಯುತ್ ಬೇಡಿಕೆ ಕಡಿಮೆ ಇದ್ದಿದ್ದರಿಂದ ಈ ಹಿಂದೆಯೇ 1, 3, 5ನೇ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತಲಾ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ 1, 3, 4, 5ನೇ ಘಟಕಗಳು ಸ್ಥಗಿತಗೊಂಡಂತಾಗಿದೆ.
4ನೇ ಘಟಕ ವಿದ್ಯುತ್ ಉತ್ಪಾದನೆ ವೇಳೆ ಟ್ಯೂಬ್‌ನಲ್ಲಿ ಲೀಕೇಜ್ ಪರಿಣಾಮದಿಂದ ಸ್ಥಗಿತಗೊಂಡಿದೆ. ಒಟ್ಟು 1760 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಆರ್‌ಟಿಪಿಎಸ್ ಕೇಂದ್ರದಲ್ಲಿ 2, 6, 7 ಮತ್ತು 8ನೇ ಘಟಕಗಳಿಂದ 633 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬೇಸಿಗೆ ಸಮಯದಲ್ಲಿ ಸೌರಶಕ್ತಿ, ಪವನ ಶಕ್ತಿಗಳಿಂದ ವಿದ್ಯುತ್ ಉತ್ಪಾದನೆ ಏರಿಕೆಯಾಗಿದ್ದರಿಂದ ಮತ್ತು ಲಾಕ್‌ಡೌನ್‌ನಿಂದ ವಿದ್ಯುತ್ ಬೇಡಿಕೆ ಸಹ ಕುಸಿತಗೊಂಡಿದ್ದರಿಂದ ಶಾಖೋತ್ಪನ್ನ ವಿದ್ಯುತ್ಗೆ ಡಿಮ್ಯಾಂಡ್ ಸಹ ಕಡಿಮೆಯಾಗಿದೆ.
ಈ ಬಗ್ಗೆ ಆರ್ಟಿಪಿಎಸ್ನ ವೇಣುಗೋಪಾಲ ದೂರವಾಣಿಯಲ್ಲಿ ಈಟಿವಿ ಭಾರತ್‌ನೊಂದಿಗೆ ಮಾತನಾಡಿ, 'ನಿನ್ನೆ ರಾತ್ರಿ ಒಂದೂವರೆ ಸುಮಾರಿಗೆ 4ನೇ ಘಟಕದ ಟ್ಯೂಬ್‌ನಲ್ಲಿ ಸೋರಿಕೆ ಕಂಡು ಬಂದಿದೆ. ಹೀಗಾಗಿ 4ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. 1, 3, 5ನೇ ಘಟಕಗಳನ್ನು ವಿದ್ಯುತ್ಗೆ ಬೇಡಿಕೆ ಇಲ್ಲದ ಕಾರಣದಿಂದ ಸ್ಥಗಿತಗೊಳಿಸಲಾಗಿದೆ. ಸದ್ಯ 4ನೇ ಘಟಕ ಬಂದ್ ಮಾಡಿರುವುದರಿಂದ, ಬೇರೆ ಇನ್ನೊಂದು ಘಟಕದಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.