ರಾಯಚೂರು: ನಾರಾಯಣಪುರ ಬಲದಂಡೆಯ ನಿರ್ಮಾಣ ಹಂತದ ಕಾಲುವೆಗೆ ನೀರು ಹರಿಸಿದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.
ತಾಲೂಕಿನ ಅಸ್ಕಿಹಾಳ ರಾಂಪೂರ ಗ್ರಾಮಗಳ ಸೀಮಾಂತರದಲ್ಲಿ ಬರುವ ನಾರಾಯಣಪುರ ಬಲದಂಡೆಯ ನಿರ್ಮಾಣ ಹಂತದ ಕಾಲುವೆಗೆ ಕೆಜಿಬಿಎನ್ಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಹರಿದಿದೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮ ಕಟಾವು ಹಂತದಲ್ಲಿ ಇದ್ದ ಭತ್ತ, ತೊಗರಿ, ಹತ್ತಿ ಬೆಳೆ ಹಾನಿಗೊಂಡಿದ್ದು, ಅತಿವೃಷ್ಟಿ ಹಾನಿಯಿಂದ ಕಂಗಾಲಾಗಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಸ್ಕಿಹಾಳ, ರಾಂಪುರ, ಯಕ್ಲಾಸಪೂರ ಗ್ರಾಮಗಳ ವ್ಯಾಪ್ತಿಯ ನಿರ್ಮಾಣ ಹಂತದ ಕಾಲುವೆಗೆ ಕಳೆದ ಒಂದು ವಾದದಿಂದ ನೀರು ಬರುತ್ತಿರುವ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ಸುಮಾರು ಹದಿನೈದು ಅಡಿ ನೀರು ಕಾಲುವೆಯಲ್ಲಿದ್ದು, ಹೆಚ್ಚುವರಿ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಬೆಳೆ ಹಾನಿಗೊಂಡಿರುವ ಹಿನ್ನೆಲೆ ಸಂಪೂರ್ಣ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದರು.