ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬೋಗಾಪುರ ಗ್ರಾಮದ ಬಳಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ.
ಕೃಷ್ಣಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬಿಸಲಾಗುತ್ತಿದೆ. ಈ ವೇಳೆ ಕಾಲುವೆ ಮೂಲಕ ಮೊಸಳೆ ಕೆರೆಗೆ ಬಂದಿದೆ. ಇಂದು ಬೆಳಗ್ಗೆ ಕೆರೆಯಿಂದ ಹೊರ ಬಂದಿರುವ ಮೊಸಳೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕಳೆದ 10 ದಿನಗಳ ಹಿಂದೆ ಗ್ರಾಮದಲ್ಲಿ ಎರಡು ಮೊಸಳೆಗಳನ್ನು ಹಿಡಿದು ನದಿಗೆ ಬಿಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಬೃಹತ್ ಗಾತ್ರದ ಮೊಸಳೆ ಬಂದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಜಮೀನು ಇರುವ ರೈತರು ಹೊಲಕ್ಕೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಇದುವರೆಗೆ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.