ರಾಯಚೂರು : ಕೊರೊನಾ ಸೋಂಕಿತರು ಅಂದರೆ ಹತ್ತಿರ ಹೋಗಲು ಹಿಂಜರಿಯುತ್ತಾರೆ. ಆದರೆ, ದಂಪತಿಯೊಂದು ಸೋಂಕಿತರನ್ನ ಮಾನವೀಯತೆಯಿಂದಲೇ ಆರೈಕೆ ಮಾಡ್ತಾ ಗಮನ ಸೆಳೆಯುತ್ತಿದೆ.
ಸೋಂಕಿತರಿಗೆ ಹಲವು ತಿಂಗಳಿನಿಂದ ಉಚಿತವಾಗಿ ಊಟ, ಉಪಚಾರ ಮಾಡಿ ಆರೈಕೆ ಮಾಡಿಕೊಂಡು ಬರುತ್ತಿದ್ದಾರೆ. ಐಶ್ಚರ್ಯ ರೈಸ್‌ಮಿಲ್ ಮಾಲೀಕರಾಗಿರುವ ಮುರಳಿಕೃಷ್ಣ ಪತ್ನಿ ನಾಗಶ್ರಾವಂತಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಳೆದ ವರ್ಷ ಇವರ ತಂದೆ ದೂರದ ಕರ್ನೂಲ್ನಿಂದ ಆಗಮಿಸಿದ್ದ ವೇಳೆ ನೆರೆಹೊರೆಯವರು ಮನೆಯೊಳಗೆ ಸೇರಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಈ ವೇಳೆ ಅವರನ್ನು ಪ್ರತ್ಯೇಕವಾಗಿರಿಸಿ ಊಟ,ಉಪಹಾರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆ ಬಳಿಕ ಸೋಂಕಿತರ ನೆರವಿಗೆ ಮುಂದಾಗಬೇಕು ಎಂದುಕೊಂಡಿದ್ದರು.
ಬಳಿಕ ಒಂದು ತಿಂಗಳ ಮಟ್ಟಿಗೆ ಈ ಕೆಲಸ ಮಾಡಲು ಮುಂದಾದಾಗ ಸ್ನೇಹಿತರ ಹಾಗೂ ಜನತೆಯ ಸಹಕಾರದಿಂದ ಹಲವು ತಿಂಗಳಿಂದ ಈ ಕಾರ್ಯ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಇದೀಗ ಸುಮಾರು 60ಕ್ಕೂ ಹೆಚ್ಚು ಸೋಂಕಿತರಿಗೆ ಮನೆ ಅಥವಾ ಆಸ್ಪತ್ರೆ ಎಲ್ಲಿಯೇ ಇದ್ದರೂ ಉಚಿತವಾಗಿ ಊಟ ತಲುಪಿಸುವ ಕಾರ್ಯ ಮಾಡುತ್ತಾರೆ.
ಈ ಬಗ್ಗೆ ಮುರಳಿಕೃಷ್ಣ ಮಾತನಾಡಿ, ಕೋವಿಡ್ ದೃಢಪಟ್ಟವರ ಕಾಳಜಿ ವಹಿಸುವುದಕ್ಕೆ ಸಂಬಂಧಿಗಳೇ ಯೋಚಿಸುವಂತಾಗಿದೆ. ರೋಗಿಗಳಿಗೆ ಸರಿಯಾಗಿ ಊಟ, ಉಪಹಾರ ದೊರೆತರೆ ಖಂಡಿತ ಚೇತರಿಸಿಕೊಳ್ಳುತ್ತಾರೆ.
ಹಣ ಇದ್ದರೂ ಅದರಿಂದ ಅನುಕೂಲ ಮಾಡಿಕೊಳ್ಳದಂತಹ ಪರಿಸ್ಥಿತಿಯಲ್ಲಿ ಬಹಳಷ್ಟು ರೋಗಿಗಳಿದ್ದಾರೆ. ಬೇರೆ ಊರಿನಿಂದ ಚಿಕಿತ್ಸೆಗಾಗಿ ಬಂದವರಿಗೆ ಸರಿಯಾಗಿ ಊಟ ಸಿಗುವುದೇ ಇಲ್ಲ. ಈ ಹಿನ್ನೆಲೆ ಅವರಿಗೆ ಊಟ ನೀಡಲು ಮುಂದಾಗಿದ್ದೇನೆ ಎಂದಿದ್ದಾರೆ.
ಊಟ ಅಗತ್ಯ ಇದ್ದವರು ನಂ- (9739422692)ಕ್ಕೆ ಕರೆ ಮಾಡಿದಲ್ಲಿ ನಗರದಲ್ಲಿ ಎಲ್ಲೆ ಇದ್ದರೂ ಅವರ ಸೇವೆ ಮಾಡುತ್ತೇವೆ ಎಂದಿದ್ದಾರೆ.