ರಾಯಚೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಆಶಾದಾಯಕ ಬೆಳವಣಿಗೆಯಲ್ಲಿ ಸೋಂಕಿತರಾಗಿದ್ದ ಹಲವರು ಗುಣಮುಖರಾಗಿ ಎಂದಿನಂತೆ ಜೀವನ ನಡೆಸುತ್ತಿದ್ದಾರೆ. ರಾಯಚೂರಿನಲ್ಲಿ ಸಂಚಾರಿ ಹೆಡ್ ಕಾನ್ಸ್ಟೇಬಲ್ ಸೋಂಕನ್ನು ಜಯಿಸಿ ಬಂದಿದ್ದು, ಸೋಂಕಿನ ಭೀತಿ ಇರುವ ಜನರಿಗೆ ಧೈರ್ಯ ತುಂಬಿದ್ದಾರೆ.
ಮಹ್ಮದ್ ಖದೀರ್, ಸೋಂಕಿನಿಂದ ಗುಣಮುಖರಾಗಿರುವ ಹೆಡ್ ಕಾನ್ಸ್ಟೇಬಲ್ ಆಗಿದ್ದು, ಕೊರೊನಾ ಬಂದರೆ ಏನೋ ಆಗುತ್ತದೆ ಎನ್ನುವ ಮನೋಭಾವನೆಯಿಂದ ಜನರು ಹೊರಗೆ ಬರಬೇಕು. ಕ್ವಾರಂಟೈನ್ ಹಾಗೂ ಐಸೊಲೇಷನ್ ವಾರ್ಡ್ನಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳಬೇಕು ಹಾಗೂ ನಮ್ಮಲ್ಲಿರುವ ಮನೋಸ್ಥೈರ್ಯವನ್ನ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ ಕೊರೊನಾ ಸೋಂಕು ಬಂದಿದೆ ಎಂದು ಯಾರೂ ಆತಂಕಕ್ಕೆ ಒಳಗಾಗಬೇಡಿ. ಧೈರ್ಯವಾಗಿ ಇರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಉಪಯೋಗಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯಕ್ಕೆ ಮಹ್ಮದ್ ಖದೀರ್ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದು, ಸಹೊದ್ಯೋಗಿಗಳು ಖದೀರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.