ರಾಯಚೂರು: ತಾಲೂಕಿನ ಶಕ್ತಿ ನಗರದಲ್ಲಿರುವ ಆರ್‌ಟಿಪಿಎಸ್ ಕೇಂದ್ರದ 8ನೇ ಯೂನಿಟ್‌ನ ಚಿಮಣಿ ಮೇಲೆ ಕುಳಿತು ಕಾರ್ಮಿಕರೊಬ್ಬರು ತಮ್ಮ ಜೀವದ ಹಂಗು ತೊರೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ವೇತನ ಹೆಚ್ಚಳ, ಬೋನಸ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುತ್ತಿಗೆ ಕಾರ್ಮಿಕ ಸಣ್ಣ ಸೂಗಪ್ಪ ಏಕಾಏಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ಕೇರಳ ಮೂಲದ ಭವಾನಿ ಎರೆಕ್ಟರ್ಸ್ ಕಂಪನಿಯ ಅಡಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಂಪನಿಯಿಂದ ಗುತ್ತಿಗೆ ಕಾರ್ಮಿಕರಿಗೆ ಕಾಲಕಾಲಕ್ಕೆ ವೇತನ ಹೆಚ್ಚಳ, ಬೋನಸ್ ಸೇರಿದಂತೆ ಇತರ ಸವಲತ್ತುಗಳನ್ನು ಕಲ್ಪಿಸಬೇಕು. ಈ ಬಗ್ಗೆ ಹಲವು ಬಾರಿ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದಕ್ಕೂ ಸ್ಪಂದನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಕಾರ್ಮಿಕ ಬೃಹತ್ ಗಾತ್ರದ ಆರ್‌ಟಿಪಿಎಸ್ 8ನೇ ಘಟಕದ ಚಿಮಣಿ ಏರಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಗುತ್ತಿಗೆದಾರರು, ಆರ್‌ಟಿಪಿಎಸ್ ಅಧಿಕಾರಿಗಳು ಹಾಗೂ ಕಂಪನಿ ಅಧಿಕಾರಿಗಳು ದುರಂಹಕಾರಿವಾಗಿ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಇನ್ನು, ಚಿಮಣಿ ಮೇಲೇರಿ ಕುಳಿತಿರುವ ಕಾರ್ಮಿಕನ್ನು ಕೆಳಗೆ ಇಳಿಯುವಂತೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಅಧಿಕಾರಗಳು ಮನವೊಲಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳದ ಕೆಳಗಡೆ ಕಾರ್ಮಿಕರು, ಆರ್‌ಟಿಪಿಎಸ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವೆ ವಾಗ್ವದ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ರಸ್ತೆ ಗುಂಡಿ ಸಮೀಪ ಕುಳಿತು ನಿವೃತ್ತ ಸರ್ಕಾರಿ ನೌಕರನಿಂದ ಏಕಾಂಗಿ ಪ್ರತಿಭಟನೆ