ರಾಯಚೂರು : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ತಯಾರಿಯಲ್ಲಿರುವ ಕಾಂಗ್ರೆಸ್, ಇಂದು ಬಿಡುಗಡೆಗೊಳಿಸಿರುವ ಎರಡನೇ ಪಟ್ಟಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಈಡಿಗ ಸಮುದಾಯದ ನಾಯಕರಿಗೆ ಟಿಕೆಟ್ ನೀಡಿಲ್ಲ. ಈ ಕುರಿತು ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ. ಪ್ರಣವಾನಂದ ಸ್ವಾಮೀಜಿ ಮಾತನಾಡಿ, ನಮ್ಮ ಸಮುದಾಯದ ನಾಯಕರಿಗೆ ಟಿಕೆಟ್ ನೀಡದೇ ಕಾಂಗ್ರೆಸ್ ನಾಯಕರು ಕಡೆಗಣಿಸಿದ್ದಾರೆ ಎಂದು ಹೇಳಿದರು.
ಇಂದು ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಈಡಿಗ ಸಮುದಾಯಕ್ಕೆ ಸೇರಿದ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ನಮ್ಮ ಸಮುದಾಯದ ನಾಯಕ. ಇವರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಿದ್ದಾರೆ. ಕಳೆದ 42 ವರ್ಷಗಳಿಂದ ಕ್ಷೇತ್ರ ಒಬಿಸಿ ಕೈಯಲ್ಲಿತ್ತು. ಆದರೆ ಈ ಬಾರಿ ಅನ್ಯಾಯವಾಗಿದೆ ಎಂದರು.
ಈ ಹಿಂದೆಯೂ ಕೂಡಾ ನಮ್ಮ ಸಮಾಜದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಭಾಗದಲ್ಲಿ ನಮ್ಮ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವ ಕಾರಣಕ್ಕೆ ಎಚ್.ಆರ್.ಶ್ರೀನಾಥ್‌ಗೆ ಟಿಕೆಟ್ ಕೊಡುವಂತೆ ಕೇಳಿದ್ದೆವು. ಇದಕ್ಕೆ ಎಲ್ಲ ನಾಯಕರು ಒಪ್ಪಿಕೊಂಡಿದ್ದರು. ಆದರೆ ಸಿದ್ಧರಾಮಯ್ಯನವರ ಹಠ ನಮ್ಮ ಸಮಾಜಕ್ಕೆ ವಿರುದ್ದವಾಗಿದ್ದು, ಶ್ರೀನಾಥ್ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆ ಕರೆದು ತೀರ್ಮಾನ: ಕಲ್ಯಾಣ ಕರ್ನಾಟಕ ಭಾಗದ 15 ಕ್ಷೇತ್ರಗಳಲ್ಲಿ ಈಡಿಗ ಸಮಾಜದ ಜನರು ನಿರ್ಣಯಕರಾಗಿದ್ದಾರೆ. ಈಗ ಆಗಿರುವ ಅನ್ಯಾಯಕ್ಕೆ ಏನು ಮಾಡಬೇಕು ಎಂಬ ಕುರಿತಾಗಿ ಮುಂಬರುವ ಎರಡು ದಿನಗಳಲ್ಲಿ ಸಮುದಾಯದ ಮುಖಂಡರ ಸಭೆ ಕರೆದು ಆಯಾ ಕ್ಷೇತ್ರದಲ್ಲಿ ಮತಗಳನ್ನು ಯಾವ ಕಡೆ ತಿರುಗಿಸಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗುತ್ತಿವೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ಮಂಡ್ಯ ಜಿಲ್ಲೆಗಳಲ್ಲಿ ಎಂಟು ಕ್ಷೇತ್ರಗಳಲ್ಲಿ ಒಕ್ಕಲಿಗೆ ಸಮುದಾಯಕ್ಕೆ ಮೂರೂ ಪಕ್ಷದವರು ಟಿಕೆಟ್ ನೀಡುತ್ತಾರೆ. ಯಾಕೆಂದರೆ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದರೆ. ಹಾಗಿದ್ದಲ್ಲಿ ಮಂಗಳೂರು, ಕಾರವಾರ, ಉಡುಪಿ, ಶಿವಮೊಗ್ಗ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಹೆಚ್ಚಿನ ಜನಸಂಖ್ಯೆಯಿದೆ. ನಮ್ಮ ಸಮಾಜದ ಸ್ಥಾನಮಾನ ಕಸಿದುಕೊಂಡು ಬೇರೆಯವರಿಗೆ ನೀಡಿದಾಗ ಪ್ರತಿಭಟನೆ ಮಾಡಬಾರದೇ?. ಕೂಡಲೇ ಈಗ ಆಗಿರುವ ಅನ್ಯಾಯವನ್ನು ಕಾಂಗ್ರೆಸ್ ನಾಯಕರು ಸರಿಪಡಿಸಬೇಕು. ಇಕ್ಬಾಲ್ ಅನ್ಸಾರಿಗೆ ನೀಡಿರುವ ಟಿಕೆಟ್ ಅನ್ನು ಎಚ್.ಆರ್.ಶ್ರೀನಾಥರಿಗೆ ನೀಡಬೇಕು. ಒಂದು ವೇಳೆ ನೀಡದಿದ್ದರೆ ಹೊಸಪೇಟೆಯಲ್ಲಿಯೂ ಸಹ ಕಾಂಗ್ರೆಸ್ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ : ಕೊಪ್ಪಳ ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚು.. ಜಿಲ್ಲೆಯಿಂದ ಶಾಸಕರಾಗಿದ್ದು ಕೇವಲ ಒಬ್ಬ ಮಹಿಳೆ ಮಾತ್ರ..