ರಾಯಚೂರು: ವಾಟರ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಪೈಪ್‌ನಲ್ಲಿ ಸಿಲುಕಿಕೊಂಡು ಪೌರ ಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಬೋಳಮಾನದೊಡ್ಡಿ ರಸ್ತೆಯ ವಿದ್ಯಾನಗರದ ಹತ್ತಿರವಿರುವ ವಾಟರ್ ಟ್ಯಾಂಕ್‌ನಲ್ಲಿ ಈ ಘಟನೆ ಸಂಭವಿಸಿದೆ. ವೆಂಕಟೇಶ (40) ಮೃತ ಪೌರ ಕಾರ್ಮಿಕನೆಂದು ಗುರುತಿಸಲಾಗಿದೆ.
ನಿನ್ನೆ ನಾಲ್ವರು ಪೌರ ಕಾರ್ಮಿಕರು ವಾಟರ್ ಟ್ಯಾಂಕ್ ಸ್ವಚ್ಛತೆ ಕಾರ್ಯ ಮಾಡಲು ತೆರಳಿದ್ದರು. ಟ್ಯಾಂಕ್‌ನಲ್ಲಿ ಇಳಿದು ಪೈಪ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಪೈಪ್‌ನಲ್ಲಿ ಕಾರ್ಮಿಕ ವೆಂಕಟೇಶ್ ಕಾಲು ಸಿಲುಕಿದೆ. ಈ ವೇಳೆ ಜೊತೆಯಲ್ಲಿದ್ದ ಮೂವರು ಕಾರ್ಮಿಕರು ಆತನನ್ನು ಮೇಲೆ ಎಳೆಯಲು ಪ್ರಯತ್ನ ಮಾಡಿದ್ದಾರೆ, ಆದರೂ ಹೊರಬರಲಾಗದೆ ಪೈಪ್‌ನೊಳಗೆ ಸಿಲುಕಿ ಪೌರ ಕಾರ್ಮಿಕ ಮೃತಪಟ್ಟಿದ್ದಾನೆ. ಇನ್ನುಳಿದ ಮೂವರು ಕಾರ್ಮಿಕರು ಸುರಕ್ಷಿತವಾಗಿದ್ದಾರೆ.
ಘಟನಾ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ನೇತಾಜಿ ಪೊಲೀಸರು ದೌಡಾಯಿಸಿದ್ದಾರೆ. ಅಲ್ಲದೇ ಕಾರ್ಮಿಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಕಾರ್ಯ ನಡೆಸಿದರೂ, ಅದು ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಪೈಪ್‌ನೊಳಗೆ ಇದ್ದ ಮೃತ ದೇಹವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ಇತ್ತ ಮನೆ ಯಾಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಬಗ್ಗೆ ನೇತಾಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ವೇಳೆ, ಮಾತನಾಡಿದ ನಗರಸಭೆ ಹಿರಿಯ ಸದಸ್ಯರು ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಹಾಗೂ ಗುತ್ತಿಗೆ ಆಧಾರ ಮೇಲೆ ಮನೆಯ ಒಬ್ಬರಿಗೆ ನಗರಸಭೆಯಲ್ಲಿ ಕೆಲಸ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.