ರಾಯಚೂರು: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 30ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಮೂರು ವರ್ಷದ ಹನುಮೇಶ ಎಂಬ ಬಾಲಕ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ ಗ್ರಾಮ ಪಂಚಾಯಿತಿಯ ಪಿಡಿಒ ರೇಣುಕಾ ವಿರುದ್ಧ ಮೃತ ಬಾಲಕನ ತಂದೆ ಈರಪ್ಪ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ದೂರಿನಲ್ಲೇನಿದೆ: ಸಿರವಾರ - ದೇವದುರ್ಗ ರಸ್ತೆಯಲ್ಲಿ ಬರುವ ರೇಕಲಮರಡಿ ಗ್ರಾಮಕ್ಕೆ ಪೂರೈಕೆ ಮಾಡುವ ಕುಡಿಯುವ ನೀರಿನ ಪೈಪ್ ಲೈನ್ ಹೊಡೆದಿದೆ. ಇದರಿಂದಾಗಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿದ್ದು, ದುರಸ್ಥಿಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಲಾಗಿದೆ ಎಂದು ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ರೇಣುಕಾರಿಗೆ ಗಮನಕ್ಕೆ ತರಲಾಗಿದೆ. ಆದರೆ, ಪಿಡಿಒ ಈ ಬಗ್ಗೆ ನಿರ್ಲಕ್ಷ್ಯವಹಿಸಿದ ಕಾರಣದಿಂದ ನನ್ನ ಮಗನಿಗೆ ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಾಗಿದ್ದು, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮಗಳು ಸಹ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದಳೆ. ಜೊತೆಗೆ ಗ್ರಾಮದ ಜನರು ಅಸ್ವಸ್ಥಗೊಂಡಿದ್ದರು ಎಂದು ದೂರಿದ್ದಾರೆ.
ಹೀಗಾಗಿ ಅತಿವವಾಗಿ ಬೇಜವಾಬ್ದಾರಿ ತೋರಿದ ಪಿಡಿಒ ವಿರುದ್ಧ ಐಪಿಸಿ ಸೆಕ್ಷನ್ ಕಲಂ 277, 278, 304(ಎ) ಕಾಯಿದೆ ಅನ್ವಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರಕೇರಾ, ದೇವದುರ್ಗ ಹಾಗೂ ರಾಯಚೂರಿನ ರಿಮ್ಸ್ನಲ್ಲಿ ಅನಾರೋಗ್ಯಪೀಡಿತರು ದಾಖಲಾಗಿದ್ದಾರೆ. ರೇಕಲಮರಡಿ ಗ್ರಾಮದ ಮಗು ಕಲುಷಿತ ನೀರಿನ ಸೇವನೆಯ ಪರಿಣಾಮ ವಾಂತಿ ಭೇದಿಯಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದರು. ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಘಟನೆ ಸಂಬಂಧ ಡಿಎಚ್‌ಓ ಡಾ.ಸುರೇಂದ್ರ ಬಾಬು ಮಾತನಾಡಿ, "ಮಗುವಿನ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈಗಾಗಲೇ ಗ್ರಾಮದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಕುಡಿಯುವ ನೀರಿನಿಂದಲೇ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ ಎಂದು ಗೊತ್ತಾಗಿದೆ. ರೆಕಲಮರಡಿ ಗ್ರಾಮದಲ್ಲಿ ಮುಂದಿನ 24 ಗಂಟೆಯವರೆಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ.
ಅಗತ್ಯ ವೈದ್ಯಕೀಯ ಸಲಕರಣೆ, ಔಷಧ ಮತ್ತು ತಾತ್ಕಾಲಿಕವಾಗಿ ಶುದ್ದ ಕುಡಿಯುವ ನೀರಿವ ವ್ಯವಸ್ಥೆ ಮಾಡಲಾಗಿದೆ. ವಾಂತಿ, ಭೇದಿಯಾದ ಕೂಡಲೇ ಚಿಕಿತ್ಸೆಗೆ ಧಾವಿಸುವಂತೆ ಮನವಿ ಮಾಡಲಾಗಿದೆ. ಕಾಯಿಸಿ, ಆರಿಸಿದ ನೀರು ಕುಡಿಯುವಂತೆ ಸೂಚನೆ ನೀಡಲಾಗಿದೆ. ಡಂಗುರ ಸಾರಿ ಜಾಗೃತಿ ಮೂಡಿಸಲಾಗುವುದು" ಎಂದು ತಿಳಿಸಿದ್ದರು.
ಇದನ್ನೂ ಓದಿ:ಕುಕ್ಕರ್ ಬ್ಲಾಸ್ಟ್.. ಅಡುಗೆ ಮಾಡುತ್ತಿದ್ದ ಬಾಲಕಿಗೆ ಗಂಭೀರ ಗಾಯ
ಹಾವೇರಿ ಜಿಲ್ಲೆಯಲ್ಲಿ 50 ಜನ ಅಸ್ವಸ್ಥ: ಇತ್ತಿಚೇಗೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಚಪ್ಪರದಳ್ಳಿ ಗ್ರಾಮದಲ್ಲಿ ಆರತಕ್ಷತೆ ವೇಳೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡು ರಟ್ಟಿಹಳ್ಳಿಯ ತಾಲೂಕಾಸ್ಪತ್ರೆಗೆ ಸೇರಿದ್ದ 50 ಕ್ಕೂ ಅಧಿಕ ಜನರ ಆರೋಗ್ಯ ಸುಧಾರಿಸಿದ್ದು, ವಾಪಸ್ ತಮ್ಮ-ತಮ್ಮ ಮನೆ ಸೇರಿದ್ದಾರೆ. ರಟ್ಟಿಹಳ್ಳಿಯ ತಾಲೂಕು ಆಸ್ಪತ್ರೆ 35 ಬೆಡ್ ಇರುವ ಆಸ್ಪತ್ರೆಗೆ ಕಲುಷಿತ ಆಹಾರ ಸೇವನೆಯಿಂದ ಇಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದರೂ, ಯಾವ ವೈದ್ಯರು ತಕ್ಷಣ ನಮ್ಮ ಹತ್ತಿರ ಬರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದರು.