ರಾಯಚೂರು: ಹೈದರಾಬಾದ್-ಕರ್ನಾಟಕ ಭಾಗದ ಭೂಮಾಪನ ಇಲಾಖೆಯಲ್ಲಿ ಖಾಲಿ ಇರುವ 161 ಬಾಂದು ಜವಾನರ ನೇಮಕಾತಿಯನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ, ಕೂಡಲೇ ಹುದ್ದೆಗಳ ನೇಮಕಾತಿ ಮಾಡಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
2017ರ ಅಧಿಸೂಚನೆ ಪ್ರಕಾರ ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ ಬಾಂದು ಜವಾನರ ಹುದ್ದೆಗಳಿಗೆ ಪ್ರಕ್ರಿಯೆ ನಡೆಸಿ ಕಳೆದ ವರ್ಷ 2018ರಲ್ಲಿ 161 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು. ಪೊಲೀಸ್ ಇಲಾಖೆಯಿಂದ ಅಭ್ಯರ್ಥಿಗಳ ತಪಾಸಣೆ ಪ್ರಕ್ರಿಯೆ ಮುಗಿದು ತಿಂಗಳಾದರೂ ನೇಮಕಾತಿಗೆ ಇನ್ನೂ ಆದೇಶ ನೀಡದಿರುವುದು ಖಂಡನೀಯ. ಈ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಈಶಾನ್ಯ ಶಿಕ್ಷಕರ ವೇದಿಕೆ ಕಲಬುರಗಿ ಸಮಿತಿಯ ನೇತೃತ್ವದಲ್ಲಿ ರಾಜ್ಯ ಇಲಾಖೆ ಆಯುಕ್ತರಿಗೆ ಭೇಟಿಯಾಗಿ ಮನವಿ ಮಾಡಿದರು ನೇಮಕಾತಿ ಕೈಬಿಡಲಾಗಿದೆ ಎಂದು ಮೌಖಿಕವಾಗಿ ಹೇಳಿದ್ದಾರೆ ಎಂದು ದೂರಿದರು.
ಅಷ್ಟೇ ಅಲ್ಲದೇ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಒಂದೆರಡು ದಿನಗಳಲ್ಲಿ ನೇಮಕಾತಿ ಮಾಡುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಸರ್ಕಾರ ಸೂಕ್ತ ಕ್ರಮ ಕೈಗೊಂಡು ಒಂದು ವಾರದೊಳಗೆ ನೇಮಕಾತಿ ಆದೇಶ ನೀಡದಿದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.