ಲಿಂಗಸೂಗೂರು(ರಾಯಚೂರು): ಹೈಕೋರ್ಟ್ ನಿರ್ದೇಶನದಂತೆ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರವು ಚುನಾವಣಾ ಆಯೋಗಕ್ಕೆ ಸಹಕಾರ ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಶನಿವಾರ ಲಿಂಗಸೂಗೂರು ತಾಲೂಕು ಪಂಚಾಯತ್ನ ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅತಿವೃಷ್ಠಿ ಪ್ರದೇಶಗಳ ಅಭಿವೃದ್ಧಿ ಹಾಗೂ ಸಂಕಷ್ಟದಲ್ಲಿರುವ ಜನತೆಗೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಊಹಾಪೋಹವಷ್ಟೇ. ಮುಂದಿನ ಅವಧಿವರೆಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆಂದು ತಿಳಿಸಿದರು. ಮುಖ್ಯಮಂತ್ರಿ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಏನನ್ನು ಹೇಳಲಾರೆ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದು, ಅವರೇ ಉತ್ತರಿಸಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಈಶ್ವರಪ್ಪ ಅ'ಧರ್ಮ'ದ ಕಿಚ್ಚು ಹೊತ್ತಿಸಲು ಪ್ರಯತ್ನಿಸುತ್ತಿದ್ದಾರೆ: ಎಸ್.ಆರ್. ಪಾಟೀಲ್
ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ವರ್ಷ 13 ಕೋಟಿ ಮಾನವ ದಿನಗಳ ಗುರಿ ಹೊಂದಲಾಗಿತ್ತು. ಈಗಾಗಲೇ 10.50 ಕೋಟಿ ಮಾನವ ದಿನಗಳಿಗೆ ಕೆಲಸ ನೀಡಿದೆ. ಭ್ರಷ್ಟಾಚಾರ ತಡೆಯಲು ಕೂಲಿಕಾರರ ಖಾತೆಗೆ ನೇರವಾಗಿ ಹಣ ಪಾವತಿಸಲಾಗುತ್ತಿದೆ. ಸಾಮಾಜಿಕ ಲೆಕ್ಕ ಪರಿಶೋಧನೆ ಆಧರಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಸಚಿವರು ಹೇಳಿದರು.