ಲಿಂಗಸುಗೂರು : ರಾಯಚೂರು ಜಿಲ್ಲೆ ಲಿಂಗಸುಗೂರು ಪುರಸಭೆ ಸದಸ್ಯ ಬಾಬುರೆಡ್ಡಿ ಮುನ್ನೂರು ವಾರ್ಡ್ನಲ್ಲಿ ಕೊಳವೆ ಭಾವಿ ಕೊರೆಯಿಸಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಲಿಂಗಸುಗೂರು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ಕುಡಿವ ನೀರು ಸಂಗ್ರಹಣಾ ಕೆರೆಗೆ ನೀರು ಭರ್ತಿ ಮಾಡಿಲ್ಲ. ಹೀಗಾಗಿ ಬಹುತೇಕ ವಾರ್ಡ್ಗಳಲ್ಲಿ ದಿನದಿಂದ ದಿನಕ್ಕೆ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಳುತ್ತ ಸಾಗಿದೆ. ಆರು ದಿನಕ್ಕೊಮ್ಮೆ ನೀರು ಬಿಡುವ ಭರವಸೆಯು ಹುಸಿಯಾಗಿದೆ.
ಎಂಟು ದಿನಗಳಾದರೂ ಕುಡಿವ ನೀರು ಬಿಡದೆ ಇದ್ದಾಗ ವಾರ್ಡ್ ನಾಗರಿಕರು ಸದಸ್ಯ ಬಾಬುರೆಡ್ಡಿಗೆ ತಮಗೆ ಆಗುತ್ತಿರುವ ಸಮಸ್ಯೆ ಕುರಿತು ಗಮನ ಸೆಳೆದರು. ತಕ್ಷಣವೇ ವಾರ್ಡ್ 17ರ ಸ್ವಾಮಿ ವಿವೇಕಾನಂದ ನಗರ ಆಯಕಟ್ಡಿನ ಸ್ಥಳದಲ್ಲಿ ಶನಿವಾರ ರಾತ್ರಿ ಕೊಳವೆಬಾವಿ ಕೊರೆದು ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದಾರೆ.
ಪುರಸಭೆ ಸದಸ್ಯ ಬಾಬುರೆಡ್ಡಿ ಮುನ್ನೂರು ಮಾತನಾಡಿ, ಪುರಸಭೆ ಶುದ್ಧ ಮತ್ತು ಸಮರ್ಪಕ ಕುಡಿವ ನೀರು ಪೂರೈಸುವಲ್ಲಿ ವಿಫಲವಾಗಿದೆ. ಅವರಿವರ ಮೇಲೆ ಆರೋಪ ಹೊರಿಸುವ ಬದಲು ನನ್ನ ಕೈಲಾದ ಸೇವೆ ಕೊಳವೆಬಾವಿ ಕೊರೆಯಿಸಿ ಕೊಟ್ಟಿರುವೆ ಎಂದು ಹೇಳಿಕೊಂಡಿದ್ದಾರೆ. ಸಮಾಜ ಸೇವಕ ಪ್ರಭುಗಸ್ತಿ ಹಾಗೂ ಸ್ನೇಹಿತರ ಬಳಗ ಸದಸ್ಯ ಬಾಬುರೆಡ್ಡಿ ಅವರ ಜನಪರ ಕಾಳಜಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.