ರಾಯಚೂರು: ನಗರಸಭೆ ಸದಸ್ಯ ಮಕ್ಬೂಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಇಬ್ಬರು ಆರೋಪಿಗಳ ಮೇಲೆ ಗುಂಡು ಹಾರಿಸಲಾಗಿದೆ.
ನಗರದ ಬಿಜನಗೆರೆ ರಸ್ತೆ, ಬೊಳಮ್ಮಾನದೊಡ್ಡಿ ರಸ್ತೆಯಲ್ಲಿ ರಿಯಾಜ್, ಅಜುಬುದ್ದೀನ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಜಾಕೀರ್ ಹುಸೇನ್ ವೃತ್ತದ ಬಳಿ ಆರು ಜನರ ತಂಡ ನಿನ್ನೆ ರಾತ್ರಿ ಮಕ್ಬೂಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ರು. ಇದರಿಂದ ತ್ರೀವ್ರವಾಗಿ ಗಾಯಗೊಂಡಿದ್ದ ಮಕ್ಬೂಲ್ ಅವರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿದೆ ಅವರು ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಆರೋಪಿಗಳ ಜಾಡು ಹಿಡಿದು ಹೋಗಿದ್ದು, ಆರು ಜನ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಗೊರಾಮಸೂಮ್, ರಿಯಾಜ್, ಸೈಯದ್ ಆಶ್ರಫ್, ಮಹ್ಮದ್ ಯಾಸೀನ್, ಕಾಶಿನಾಥ, ಅಜ್ಜು ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಸದರಬಜಾರ್ ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಯಲ್ಲಪ್ಪ ಹಾಗೂ ಚಂದ್ರಕಾಂತ್ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಹೀಗಾಗಿ ಸಿಪಿಐ ಫಸಿಯುದ್ದೀನ್, ಪಿಎಸ್‌ಐ ಮಂಜುನಾಥ ಇಬ್ಬರು ಫೈರಿಂಗ್ ಮುನ್ನ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದ್ರೂ ಎಚ್ಚರಗೊಳ್ಳದಿದ್ದಾಗ ಅಜ್ಜು ಹಾಗೂ ರಿಯಾಜ್ ಮೇಲೆ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ನಗರಸಭೆ ಸದಸ್ಯನ ಹತ್ಯೆಗೆ ಹಳೇ ದ್ವೇಷವೇ ಕಾರಣವೆಂದು ತಿಳಿದು ಬಂದಿದೆ. ನಗರದಲ್ಲಿ 6 ತಿಂಗಳ ಹಿಂದೆ ರೈಲ್ವೆ ಹಳಿ ಬಳಿ ಇಬ್ಬರು ಯುವಕರ ಶವ ಪತ್ತೆಯಾಗಿತ್ತು. ಇದರಲ್ಲಿ ಒಂದು ಮಕ್ಬೂಲ್ ಸಂಬಂಧಿಯ ಶವವಾಗಿತ್ತು. ಹಲ್ಲೆ ಮಾಡಿದವರು ರೌಡಿಶೀಟರ್ಗಳಾಗಿದ್ದು, ಇವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಸದ್ಯ ಘಟನೆ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೆ ಫೈರಿಂಗ್ ಮಾಡಲಾಗಿದೆ. ಗಾಯಗೊಂಡವರನ್ನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಎಸ್ಪಿ ನಿಕ್ಕಂ ಪ್ರಕಾಶ್ ತಿಳಿಸಿದ್ದಾರೆ.