ರಾಯಚೂರು: ಪೊಲೀಸ್ ಠಾಣೆ ಮುಂಭಾಗ ವ್ಯಕ್ತಿಯೋರ್ವ ತಡರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಸಿಂಧನೂರು ತಾಲೂಕಿನ ಬಳಗಾನೂರು ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ಶಿವುಕುಮಾರ್ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಕ್ರಮ ಮರಳುಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಶಿವುಕುಮಾರ್ ಮೇಲೆ ಪ್ರಕರಣ ದಾಖಲಾಗಿದ್ದು, ಟ್ರ್ಯಾಕ್ಟರ್ ಅನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದರು.
ಹೀಗಾಗಿ ನನ್ನ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಠಾಣೆಯ ಮುಂದೆ ಕ್ರಿಮಿನಾಶಕ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಗಾಡಿದ್ದಾನೆ. ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಇದನ್ನು ಗಮನಿಸಿ, ವ್ಯಕ್ತಿಯ ಕೈಯ್ಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದುಕೊಂಡಿದ್ದಾರೆ. ಕೂಡಲೆ ಆತನನ್ನು ಆ್ಯಂಬುಲೆನ್ಸ್ ಮೂಲಕ ಸಿಂಧನೂರು ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನು ಶಿವುಕುಮಾರ್ ವಿರುದ್ಧ ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣ ಮತ್ತು ರೌಡಿಶೀಟರ್ ಪ್ರಕರಣ ಸಹ ದಾಖಲಾಗಿದೆ. ಜೊತೆಗೆ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಕಲಂ-390 ಐಪಿಸಿ ಸೆಕ್ಷನ್ ಅಡಿ ಬಳಗಾನೂರು ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.