ರಾಯಚೂರು: ಹಿಂದುಳಿದ ರಾಯಚೂರು ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಸಮಸ್ಯೆ ತೊಲಗಿಸಲು ಸರ್ಕಾರ ನಾನಾ ಯೋಜನೆ ಜಾರಿಗೊಳಿಸಿದ್ರೂ ಕೂಡ ಸಂಪೂರ್ಣವಾಗಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಆದ್ರೆ ವರ್ಷದಿಂದ ವರ್ಷಕ್ಕೆ ಅಪೌಷ್ಟಿಕ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದೆ. ಕೊರೊನಾ ಸೋಂಕು ಹರಡಿದ ಬಳಿಕವೂ ಆಹಾರ ಧಾನ್ಯಗಳನ್ನ ವಿತರಣೆ ಮಾಡಲಾಗುತ್ತಿದ್ದು, ಇದೀಗ ಪೋಷಣಾ ಅಭಿಯಾನವನ್ನು ನಡೆಸಲಾಗುತ್ತಿದೆ.
ಜಿಲ್ಲೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು, ಬಡತನ, ಅನಕ್ಷರತೆ, ಆರೋಗ್ಯ ಸಮಸ್ಯೆ ಜನರನ್ನು ಕಾಡುತ್ತಿವೆ. 2017-2018ನೇ ಸಾಲಿನಿಂದ 2019 ನವೆಂಬರ್ ಅಂತ್ಯದವರೆಗೆ 3,657 ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳು ಪತ್ತೆಯಾಗಿದ್ದಾರೆ. ಈ ಪೈಕಿ 2017-2018ನೇ ಸಾಲಿನಲ್ಲಿ 1,630, 2018-2019ನೇ ಸಾಲಿನಲ್ಲಿ 1,188, 2019-2020ನೇ ಸಾಲಿನಲ್ಲಿ 839 ಮತ್ತು 2020-2021ನೇ ಸಾಲಿನಲ್ಲಿ 678 ವಿಪರೀತ ಕಡಿಮೆ ತೂಕದ ಮಕ್ಕಳು ಪತ್ತೆಯಾಗಿದ್ದು, ಅಪೌಷ್ಟಿಕತೆಗೆ ಗುರಿಯಾಗಿದ್ದಾರೆ.
ಅಪೌಷ್ಟಿಕತೆ ಮಕ್ಕಳ ಪೌಷ್ಟಿಕತೆ ಹೆಚ್ಚಿಸಲು ಸರ್ಕಾರದಿಂದ ನಾನಾ ಯೋಜನೆಗಳ ಮೂಲಕ ಪೌಷ್ಟಿಕ ಆಹಾರ ಪದಾರ್ಥ ವಿತರಣೆ, ವೈದ್ಯಕೀಯ ವೆಚ್ಚ, ಅವಶ್ಯಕತೆಯಿದಲ್ಲಿ ಚಿಕಿತ್ಸೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಕೊರೊನಾ ಸೋಂಕು ಹರಡಲು ಪ್ರಾರಂಭವಾದ ನಂತರವೂ ಸಹ ಅಂಗನವಾಡಿ ಕಾರ್ಯಕರ್ತೆರಿಂದ ಮಕ್ಕಳಿಗೆ, ತಾಯಂದಿಯರಿಗೆ ಪೌಷ್ಟಿಕ ಆಹಾರ ಪದಾರ್ಥಗಳ ವಿತರಣೆ ಮಾಡಲಾಗಿದೆ.
ಕೊಳಗೇರಿ ಪ್ರದೇಶದಲ್ಲಿ ತಾಯಂದಿರಿಗೆ, ಮಕ್ಕಳಿಗೆ ಅಪೌಷ್ಟಿಕತೆ ಹೆಚ್ಚಾಗಿರುತ್ತದೆ. ಆದ್ರೆ ಇಂತಹ ಪ್ರದೇಶದಲ್ಲಿ ಪ್ರತ್ಯೇಕವಾಗಿ ಅಪೌಷ್ಟಿಕತೆಯನ್ನ ಹೋಗಲಾಡಿಸುವ ನಿಟ್ಟಿನಲ್ಲಿ ಕೊರೊನಾ ವೈರಸ್ ಭೀತಿ ನಡುವೆ ವಿಶೇಷ ಅಭಿಯಾನವೇನೂ ಹಮ್ಮಿಕೊಂಡಿಲ್ಲ. ಬದಲಾಗಿ ಅಂಗನವಾಡಿ ಕಾರ್ಯಕರ್ತೆರಿಂದ ಆಹಾರ ಪದಾರ್ಥಗಳನ್ನ ನೀಡುವುದು, ಆರೋಗ್ಯ ತಪಾಸಣೆ ಮಾಡುವುದು, ಅಗತ್ಯ ಸೌಲಭ್ಯವನ್ನು ಕಲ್ಪಿಸುವುದು ಹಾಗೂ ಕೊರೊನಾ ವೈರಸ್ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮನೆ ಮನೆಗೆ ತೆರಳಿ ಮಾಡಲಾಗಿದೆ. ಇತ್ತೀಚೆಗೆ ಈ ಪೋಷಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೀರನಗೌಡ ತಿಳಿಸಿದರು.