ರಾಯಚೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ 2021-2022ನೇ ಸಾಲಿನ ಬಜೆಟ್ ಮೇಲೆ ಜಿಲ್ಲೆಯ ಜನತೆ ಬೆಟ್ಟದಷ್ಟು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ರಾಯಚೂರು ನಗರ ಹೊರವಲಯಕ್ಕೆ ರಿಂಗ್ ರೋಡ್ ನೀಡಿರುವುದನ್ನು ಹೊರತು ಪಡಿಸಿದ್ರೆ, ಉಳಿದಂತೆ ಜಿಲ್ಲೆಯ ಮಟ್ಟಿಗೆ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಅನುದಾನ ನೀಡದೆ ಬಜೆಟ್ ನಿರಾಸೆ ತಂದಿದೆ ಎನ್ನುವ ಮಾತು ಕೇಳಿಬಂದಿದೆ.
ನೂತನವಾಗಿ ಆರಂಭವಾಗಲಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ರೂಪಾಯಿಯ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದ್ರೆ ವಿವಿಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಕೃಷಿ ವಿವಿ ವಿಸ್ತರಣೆ, ಬೋಧನೆಗಾಗಿ ಕೋಟ್ಯಾಂತರ ರೂಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೂ ಸಹ ಅನುದಾನ ಒದಗಿಸಿಲ್ಲ. ನಗರದ ಹೊರವಲಯದಲ್ಲಿ ವಿಮಾನ ನಿಲ್ದಾಣಕ್ಕೆ ಅನುದಾನದ ಅವಶ್ಯಕತೆಯಿದೆ. ಆದ್ರೆ ವಿಮಾನ ನಿಲ್ದಾಣ ಸೇರಿದಂತೆ ಏಮ್ಸ್ ಆಸ್ಪತ್ರೆ, ಮೂಲಭೂತ ಸೌಕರ್ಯ, ರಸ್ತೆಗಳ ಸುಧಾರಣೆ, ಕೈಗಾರಿಕೆ ಅಭಿವೃದ್ಧಿ ಸೇರಿದಂತೆ ಯಾವುದೇ ಮಹತ್ವದ ಯೋಜನೆಗಳಿಗೆ ಅನುದಾನ ನೀಡಿಲ್ಲ.
ಜನರಿಗೆ ತುರ್ತು ಹಾಗೂ ಹೆಚ್ಚಿನ ಚಿಕಿತ್ಸೆ ಪಡೆಯಬೇಕಾದ್ರೆ, ಹೈದರಾಬಾದ್, ಬೆಂಗಳೂರು, ಸೊಲ್ಲಾಪುರ ಮಹಾನಗರಗಳಿಗೆ ತೆರಳಬೇಕಾಗಿದೆ. ಹೀಗಾಗಿ ಹೈಟೆಕ್ ಇಲ್ಲವೇ ಮಲ್ಟಿಸ್ಪೆಷಲಿಸ್ಟ್ ಆಸ್ಪತ್ರೆ ಸ್ಥಾಪಿಸಬೇಕು. ಇಲ್ಲವೇ ಒಪೆಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಒತ್ತಾಯವಿತ್ತು. ಅದಕ್ಕೂ ಬಜೆಟ್ನಲ್ಲಿ ಮಣೆ ಹಾಕಿಲ್ಲ.
ಪ್ರಮುಖವಾಗಿ ಜಿಲ್ಲೆಯಲ್ಲಿ ತುಂಗಭದ್ರಾ ಎಡದಂಡೆ ನಾಲೆ ಯೋಜನೆ ಮತ್ತು ನಾರಾಯಣಪುರ ಬಲದಂಡೆ ನಾಲಾ ಯೋಜನೆಗಳಿವೆ. ಆದರೆ ನೀರಾವರಿಗಾಗಿ ಅನುದಾನ ನೀಡಿಲ್ಲ. ಮಸ್ಕಿ, ಸಿರವಾರ ನೂತನ ತಾಲೂಕುಗಳಾಗಿ ಘೋಷಣೆಯಾಗಿದ್ದು, ತಾಲೂಕು ಕೇಂದ್ರವನ್ನು ಸಮರ್ಪಕವಾಗಿ ರಚನೆ ಮಾಡಲು ಅನುದಾನದ ಕೊರತೆಯಿದೆ. ಆದರೆ ಯಾವುದಕ್ಕೂ ಬಜೆಟ್ನಲ್ಲಿ ಮಹತ್ವ ಸಿಕ್ಕಿಲ್ಲ.
ಇದನ್ನೂ ಓದಿ: ಇವತ್ತು ಉತ್ತರ ಕೊಡುತ್ತೇನೆ ಎಂದ ಸಿಎಂ ನಾಪತ್ತೆಯಾಗಿದ್ದಾರೆ: ಸದನದಲ್ಲಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಕೊಟ್ಟ ಯತ್ನಾಳ್
ಇನ್ನೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜಿಲ್ಲೆಯ ಶಾಸಕರೊಬ್ಬರು ಕಾರಣರಾಗಿದ್ದಾರೆ. ಇದರ ಆಧಾರದ ಮೇಲೆ ಕೊಡಬಹುದಾದ ಭರಪೂರ ಅನುದಾನದ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
ಆದ್ರೆ ರಾಯಚೂರು ನಗರಕ್ಕೆ ರಿಂಗ್ ರೋಡ್ ನಿರ್ಮಾಣದ ಬೇಡಿಕೆಯನ್ನು ಬಹುದಿನಗಳಿಂದ ಇಡಲಾಗಿತ್ತು. ಇದಕ್ಕೆ ಮಣೆ ಹಾಕಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ವರ್ತುಲ ರಸ್ತೆ ನಿರ್ಮಾಣಕ್ಕೆ ಬಜೆಟ್ನಲ್ಲಿ ಹಣ ಘೋಷಣೆ ಮಾಡಿರುವುದು ಸಮಾಧಾನಕರ ವಿಚಾರ. ಉಳಿದಂತೆ ಜಿಲ್ಲೆಯ ಮಟ್ಟಿಗೆ ನಿರಾಸೆಯ ಬಜೆಟ್ ಎನ್ನುವುದು ಹಲವರ ಅಭಿಪ್ರಾಯವಾಗಿದೆ.