ಮೈಸೂರು: ದರೋಡೆಕೋರರು ಹಾರಿಸಿದ ಗುಂಡಿಗೆ ಯುವಕ ಬಲಿಯಾಗಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ದಡದಹಳ್ಳಿ ಗ್ರಾಮದ ಚಂದ್ರು (23) ಮೃತ ಯುವಕ ಎಂದು ಗುರುತಿಸಲಾಗಿದೆ.
ವಿದ್ಯಾರಣ್ಯಪುರಂನ ಮುಖ್ಯರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಗೆ ದರೋಡೆಕೋರರು ನುಗ್ಗಿ ಚಿನ್ನಾಭರಣ ಕದಿಯಲು ಯತ್ನಿಸಿದ್ದರು. ಇದನ್ನು ತಡೆಯಲು ಮುಂದಾದ ಮಾಲೀಕನ ಮೇಲೆ ಗುಂಡಿನ ದಾಳಿ ಮಾಡಿದ್ದರು.
ಈ ವೇಳೆ, ರಸ್ತೆಯಲ್ಲಿದ್ದ ಯುವಕನ ತಲೆಗೆ ಗುಂಡು ಹೊಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತ್ತ ಅಂಗಡಿ ಮಾಲೀಕ ಧರ್ಮೇಂದ್ರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ದರೋಡೆಕೋರರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.