ಮೈಸೂರು: ಉದ್ಯೋಗಕ್ಕಾಗಿ ಮಲೇಷ್ಯಾಕ್ಕೆ ಹೋಗಿ ಅಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಯುವಕನ ಮೃತದೇಹ ಸಂಸದರ ಸಹಾಯದಿಂದ ಸ್ವಗ್ರಾಮಕ್ಕೆ ಬಂದಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ.
ಜಿಲ್ಲೆಯ ಪಿರಿಯಾಪಟ್ಟಣದ ಯುವಕ ಸುಮಂತ್ (22) ನಿಗೂಢವಾಗಿ ಸಾವನ್ನಪ್ಪಿದ್ದು, ಈತ ಡಿಪ್ಲೊಮಾ ಮುಗಿಸಿ ಹೆಚ್ಚಿನ ಸಂಬಳಕ್ಕಾಗಿ ಮಲೇಷ್ಯಾ ದೇಶಕ್ಕೆ ಉದ್ಯೋಗ ಹುಡುಕಿಕೊಂಡು ಹೋಗಿದ್ದಾನೆ. ಅಲ್ಲಿ ಈತ ಸಮುದ್ರದಿಂದ ಮರಳು ತೆಗೆಯುವ ಕೆಲಸ ನಿರ್ವಹಿಸುತ್ತಿದ್ದನಂತೆ. ಕಳೆದ ವರ್ಷ ಡಿ.14 ರಂದು ಮಲೇಷ್ಯಾದಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ್ದು, ತಾಂತ್ರಿಕ ಕಾರಣಗಳಿಂದ ಮೃತದೇಹವನ್ನು ತಾಯ್ನಾಡಿಗೆ ತರಲು ವಿಳಂಬವಾಗಿತ್ತು.
ಸಂಸದರ ಸಹಾಯದಿಂದ ತಾಯ್ನಾಡಿಗೆ ಬಂದ ಮೃತದೇಹ:
ಯುವಕನ ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಸಂಸದ ಪ್ರತಾಪ್ ಸಿಂಹ ಅವರು ಸಹಾಯ ಮಾಡಿದ್ದು, 7 ತಿಂಗಳ ಬಳಿಕ ಸೋಮವಾರ ತಮಿಳುನಾಡಿನ ತಿರುಚನಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು, ಮಂಗಳವಾರ ಪಿರಿಯಾಪಟ್ಟಣಕ್ಕೆ ಬಂದ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನಡೆಸಿದರು.
ಈ ಸಂದರ್ಭದಲ್ಲಿ ಸಂಸದರ ಸಹಾಯಕ್ಕೆ ಮೃತ ಯುವಕನ ತಾಯಿ ಶೋಭ ಕೃತಜ್ಞತೆ ಸಲ್ಲಿಸಿದ್ದು, ಸತ್ತ ನಂತರವಾದರೂ ಮಗನ ಅಂತ್ಯಕ್ರಿಯೆ ಮಾಡಲು ಸಹಾಯ ಮಾಡಿದ ಸಂಸದರ ಸಹಾಯವನ್ನು ಸ್ಮರಿಸಿದರು.