ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಾಗಿ ವರುಣಾ ಕ್ಷೇತ್ರ ಬಿಟ್ಟುಕೊಡುತ್ತೇನೆ. ಜನ, ಪಕ್ಷ ಅಪೇಕ್ಷಿಸಿದರೆ ಸಿದ್ದರಾಮಯ್ಯ ವರುಣಾದಲ್ಲೇ ಸ್ಪರ್ಧೆ ಮಾಡಲಿ. ನಾನು ಬೇರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ. ಅದು ನನ್ನ ಕರ್ತವ್ಯ ಎಂದು ಹೇಳುವ ಮೂಲಕ ವರುಣಾ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತಂದೆಗಾಗಿ ಕ್ಷೇತ್ರದ ತ್ಯಾಗಕ್ಕೆ ಸಿದ್ಧರಾಗಿದ್ದಾರೆ.
ಈ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಆಯ್ಕೆ ವಿಚಾರಕ್ಕೆ ಇನ್ನೂ ಬಹಳಷ್ಟು ಸಮಯ ಇದೆ. ಬಹಳಷ್ಟು ಕ್ಷೇತ್ರಗಳಿಂದ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇದೆ. ಸಿದ್ದರಾಮಯ್ಯ ಮತ್ತು ಪಕ್ಷದ ಹೈಕಮಾಂಡ್ ಅಳೆದು ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ಷೇತ್ರದ ಆಯ್ಕೆ ಚರ್ಚೆ ತುರ್ತು ಈಗ ಏನು ಇಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಇದು ಶಕ್ತಿ ಪ್ರದರ್ಶನ ಅಲ್ಲ, ಇದು ಕೇವಲ ತಂದೆಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಅಷ್ಟೇ. ಇದರಲ್ಲಿ ರಾಜಕೀಯ ಹುಡುಕಬೇಡಿ. ಕಾಕತಾಳಿಯವಾಗಿ ಚುನಾವಣೆಯ ವರ್ಷವೇ ಅವರ ಅಮೃತ ಮಹೋತ್ಸವ ಬಂದಿದೆ. ಹೀಗಾಗಿ ಈ ವಿಚಾರ ಚರ್ಚೆಯಾಗುತ್ತಿದೆ ಅಷ್ಟೇ ಎಂದು ತಿಳಿಸಿದರು.
ಸಿಎಂ ಸ್ಥಾನದ ಆಕಾಂಕ್ಷಿ : ಸಿಎಂ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳುವ ಪ್ರಶ್ನೆಯೇ ಇದರಲ್ಲಿ ಇಲ್ಲ. ಪಕ್ಷಕ್ಕೆ ಮೊದಲು ಬಹುಮತ ಬರಬೇಕು. ನಂತರ ಶಾಸಕರು, ಶಾಸಕಾಂಗದ ನಾಯಕನನ್ನು ಆಯ್ಕೆ ಮಾಡಬೇಕು. ಹೈಕಮಾಂಡ್ ತನ್ನ ನಿಲುವು ತಿಳಿಸಿದಾಗ ಸಿಎಂ ಆಯ್ಕೆ ನಡೆಯುತ್ತದೆ. ಈಗಲೇ ಸಿಎಂ ಎಂದು ಬಿಂಬಿಸಿಕೊಳ್ಳುವ ಅಗತ್ಯ ಯಾರಿಗೂ ಇಲ್ಲ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಪಿಎಸ್ಐ ಅಕ್ರಮ - ಎಡಿಜಿಪಿ ದರ್ಜೆ ಉನ್ನತ ಅಧಿಕಾರಿ ಬಂಧನ: ಅಭಿನಂದನೆ ಸಲ್ಲಿಸಿದ ಹೆಚ್ಡಿಕೆ