ಮೈಸೂರು: ಚೀಟಿಗೆ ಹಣ ಹಾಕಿ ಮೋಸ ಹೋದ ಮಹಿಳೆಯೊಬ್ಬರು ಮನನೊಂದ ರಸ್ತೆಯಲ್ಲೇ ಗೋಳಾಡಿದ ಘಟನೆ ನಗರದಲ್ಲಿ ನಡೆಯಿತು. ತಿ ನರಸೀಪುರ ತಾಲೂಕಿನ ಎಳವರಹುಂಡಿ ಗ್ರಾಮದ ಮಹಿಳೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ವ್ಯಕ್ತಿಯೊಬ್ಬರ ಜೊತೆ ಸೇರಿ ಚೀಟಿ ನಡೆಸುತ್ತಿದ್ದರಂತೆ. ಆದರೆ ಆತ ಹಣ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಮಾಧುಸ್ವಾಮಿ ಎಂಬ ವ್ಯಕ್ತಿಯ ಅಂಗಡಿಯಲ್ಲಿ ನಾನು ಕಳೆದ 2 ವರ್ಷಗಳಿಂದ ಚೀಟಿ ಕಟ್ಟುತ್ತಿದ್ದೆ. ಕಳೆದ ವರ್ಷ ಸರಿಯಾಗಿ ಸಾಮಗ್ರಿಗಳನ್ನು ನೀಡಿದ್ದರಿಂದ ಈ ವರ್ಷವೂ ನೀಡುತ್ತಾರೆ ಎಂಬ ಭರವಸೆಯಲ್ಲಿ ಚೀಟಿಯಲ್ಲಿ ಸಂಗ್ರಹವಾದ ಹಣವನ್ನು ತಂದು ಕಟ್ಟುತ್ತಿದೆ. ಆದರೆ, 100 ಸೀಟು ಕೊಟ್ಟಿದ್ದಾರೆ. ಇನ್ನೂ ನೂರು ಸೀಟು ಕೊಡಬೇಕು. ಅಕ್ಕಿ ಕೊಟ್ಟಿದ್ದಾರೆ. ಆದರೆ ಸಾಮಗ್ರಿ ಕೊಟ್ಟಿಲ್ಲ. ಒಬ್ಬರಿಂದ 3,500 ರೂಪಾಯಿ ಕಲೆಕ್ಷನ್ ಮಾಡಲಾಗಿದ್ದು, 650 ಜನರಿಂದ ಸೀಟು ಹಾಕಿಸಲಾಗಿದೆ. ಪ್ರತಿ ಗ್ರಾಮದಲ್ಲಿಯೂ 25ರಿಂದ 30 ಸೀಟು ಇವೆ. ಒಟ್ಟು 25 ಲಕ್ಷ ಕಲೆಕ್ಷನ್ ಅಮೌಂಟ್ ಕೊಟ್ಟಿದ್ದೇನೆ. ನಾನು ಇಷ್ಟು ಹಣವನ್ನು ಕಟ್ಟಿದ್ದರೂ ದುಡ್ಡನ್ನೇ ಕಟ್ಟಿಲ್ಲ ಅಂತಿದ್ದಾರೆ ಎಂದು ವಂಚನೆಗೊಳಗಾದ ಮಹಿಳೆ ಅತ್ತು ಗೋಗರೆದರು.
ಗಾರ್ಮೆಂಟ್ಸ್ ಸಹೋದ್ಯೋಗಿಗಳು ಹಾಗೂ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಮಹಿಳೆಯರು ಇದರಿಂದ ಕಂಗಾಲಾಗಿದ್ದಾರೆ. ತಿ. ನರಸೀಪುರ ತಾಲೂಕಿನ ವಿದ್ಯೋದಯ ಕಾಲೇಜಿನ ಜೋಡಿ ರಸ್ತೆಯಲ್ಲಿ ಮಹಿಳೆಯ ಸಂಕಷ್ಟ ನೋಡಿದ ಜನ, ಚೀಟಿ ಸಹವಾಸವೇ ಸಾಕಪ್ಪ ಅಂತ ಮರುಗಿದರು.
ಇದನ್ನೂ ಓದಿ: ರೈತನ ಹಲ್ಲೆ.. ಅಮಾನತುಗೊಂಡ ಪಿಎಸ್‍ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲು