ಮೈಸೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ 2022 ರ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಜಿಲ್ಲೆಯ ಮೂವರು ಪಾಸಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾನಿಲಯದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆಂಪರಾಜು ಅವರ ಪುತ್ರ ಕೆ. ಸೌರಭ್ 260 ನೇ ರ‍್ಯಾಂಕ್ ಪಡೆದಿದ್ದಾರೆ. ಉತ್ತರಾಖಂಡದ ಡೆಹ್ರಾಡ್ರೂಣ್‌ನಲ್ಲಿ ನಡೆಯುತ್ತಿರುವ ತರಬೇತಿಯಲ್ಲಿ ಪಾಲ್ಗೊಂಡಿರುವ ಇವರು, ತಮ್ಮ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದಾರೆ. ಎಂ.ಟೆಕ್ ಪದವೀಧರರಾಗಿದ್ದು, ಸಮಾಜಶಾಸ್ತ್ರ ವಿಷಯದಲ್ಲಿ ಪರೀಕ್ಷೆ ಎದುರಿಸಿದ್ದರು. ಇವರ ತಾಯಿ ಡಾ.ಜಾನಕಿ ಪ್ರಾಧ್ಯಾಪಕರಾಗಿದ್ದಾರೆ.
ಇನ್ನೊಬ್ಬ ಅಭ್ಯರ್ಥಿ ಪೂಜಾ ಮುಕುಂದ್ ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಪಾಸ್ ಮಾಡಿದ್ದು, 390ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಇಂಜಿನಿಯರಿಂಗ್ ಪದವೀಧರ. ಸಂತಸ ಹಂಚಿಕೊಂಡಿರುವ ಅವರು, "ತಾಯಿ ಇಂಥದ್ದೊಂದು ಪರೀಕ್ಷೆ ಪಾಸ್ ಮಾಡಬೇಕೆಂಬ ಆಸೆ ಹೊಂದಿದ್ದರು. ಸಾಕಷ್ಟು ಪ್ರಯತ್ನ ನಡೆಸಿ ಅವರ ಆಸೆಯಂತೆ ಸಾಧನೆ ಮಾಡಿದ್ದೇನೆ. ನಾನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗಿ ತಯಾರಿ ಮಾಡಿಲ್ಲ. ಮನೆಯಲ್ಲೇ ಎಲ್ಲ ತಯಾರಿ ಮಾಡಿದ್ದೆ. ಕುಟುಂಬದ ಸಹಕಾರದಿಂದ ಸಾಧನೆ ಸಾಧ್ಯವಾಯಿತು" ಎಂದರು.
ಬೆಳವಾಡಿಯ ಜೆ.ಭಾನುಪ್ರಕಾಶ್ 448 ನೇ ರ್ಯಾಂಕ್ನೊಂದಿಗೆ ಪರೀಕ್ಷೆ ಕ್ಲಿಯರ್ ಮಾಡಿದ್ದಾರೆ. ಮೂಲತಃ ಕೆ.ಆರ್.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಭಾನುಪ್ರಕಾಶ್ ತಂದೆ ಜಯರಾಮೇಗೌಡ ಕೃಷಿಕರು. ತಾಯಿ ಗಿರಿಜಮ್ಮ ಅಂಗನವಾಡಿ ಶಿಕ್ಷಕಿ. 1 ರಿಂದ 5 ನೇ ತರಗತಿವರೆಗೆ ಬೆಳವಾಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು, 6 ರಿಂದ 12 ನೇ ತರಗತಿವರೆಗೆ ಚಾಮರಾಜನಗರದ ಹೊಂಡರಬಾಳಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.
ಮಂಡ್ಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಬಿಬಿಎಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಎಂ.ಡಿ ಪಿಡಿಯಾಟ್ರಿಕ್ಸ್ ಪದವಿ ಪಡೆದಿದ್ದಾರೆ. ಸದ್ಯ ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕಳೆದೆರಡು ಬಾರಿ ಬರೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ಇದೀಗ ಮೂರನೇ ಬಾರಿ ತೇರ್ಗಡೆಯಾಗಿದ್ದಾರೆ.
ತಮ್ಮ ಸಾಧನೆ ಕುರಿತು ಮಾತನಾಡಿರುವ ಅವರು, "ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಆಗ, ನಾಗರಿಕ ಸೇವಾ ಅಧಿಕಾರಿಯಾಗಬೇಕು. ಸಮಾಜಕ್ಕೆ ಇನ್ನಷ್ಟು ಸೇವೆ ಮಾಡಬೇಕೆಂಬ ಕನಸು ಮೂಡಿತು. ಆ ವೇಳೆ ಮದುವೆಯೂ ಆಗಿತ್ತು. ಮಗ ಅಥರ್ವ ಕೂಡ ಹುಟ್ಟಿದ್ದ. ಎಲ್ಲ ಜವಾಬ್ದಾರಿಗಳೊಟ್ಟಿಗೆ ತಯಾರಿಯನ್ನೂ ಆರಂಭಿಸಿದೆ. ಸಂಜೆ 5 ಗಂಟೆಗೆ ಕಾಲೇಜು ಮುಗಿಸಿ ಬಂದು ನಿತ್ಯ 5ರಿಂದ 5 ಗಂಟೆ ಅಭ್ಯಾಸ ನಡೆಸುತ್ತಿದ್ದೆ. ಒಂದೂ ದಿನ ಸಬೂಬು ಹೇಳಿಕೊಂಡಿಲ್ಲ. ಕಡಿಮೆ ಅವಧಿಯಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಒತ್ತಡವಿದ್ದರಿಂದ ನಿರ್ಲಕ್ಷ್ಯ ಮಾಡುವಂತಿರಲಿಲ್ಲ. ನಾನು ಮೂವತ್ತೆರಡೂವರೆ ವರ್ಷಕ್ಕೆ ಈ ಪರೀಕ್ಷೆ ಪಾಸು ಮಾಡಿದ್ದೇನೆ" ಎಂದು ಹೇಳಿದರು. ಇನ್ನು ನಿನ್ನೆ ಬಿಡುಗಡೆಯಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಇದನ್ನೂ ಓದಿ: ಬಡತನ ಮಧ್ಯೆಯೂ ಧೃತಿಗೆಡದೇ ಯಶಸ್ಸು ಸಾಧಿಸಿದ ಮುದ್ದೇಬಿಹಾಳ ತಾಂಡಾದ ಯಲಗೂರೇಶ ನಾಯಕ: ಯುಪಿಎಸ್ಸಿಯಲ್ಲಿ 890ನೇ ರ‍್ಯಾಂಕ್