ಮೈಸೂರು: ನಾಗರಹೊಳೆ ರಾಷ್ಟೀಯ ಉದ್ಯಾನದಂಚಿನಲ್ಲಿರುವ ಗಿರಿಜನರು ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪಸ್ವಾಮಿ ದೇವರ ಹಬ್ಬವನ್ನು ಹಳ್ಳಿ ಹಳ್ಳಿಗಳಲ್ಲಿ ಭಿಕ್ಷೆ ಬೇಡುತ್ತಾ ದೇವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕುಣಿದು - ಕುಪ್ಪಳಿಸುತ್ತಾ ಕುಂಡೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸಿಕ್ಕ ಸಿಕ್ಕವರನ್ನು ಕೆಟ್ಟ ಪದಗಳಿಂದ ನಿಂದಿಸುವ ಹಾಡಿಯ ಗಿರಿಜನರು: ಆದಿವಾಸಿಗಳು ತಮ್ಮ ಆರಾಧ್ಯ ದೇವರಾದ ಭದ್ರಕಾಳಿ, ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಯುವ ಈ ಹಬ್ಬಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಕಾಡಿನಲ್ಲಿ ಸಿಗುವ ಸೊಪ್ಪು, ಹಳೇ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬಿ ಹಾಗೂ ಟಿನ್‌ಗಳನ್ನು ಡೋಲಿನ ರೀತಿಯಲ್ಲಿ ಬಡಿಯುತ್ತಾ ಆಕರ್ಷಕವಾಗಿ ಕುಣಿಯುತ್ತಾ, ಸಿಕ್ಕ - ಸಿಕ್ಕವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ ಭಿಕ್ಷಾಟನೆ ಮಾಡುತ್ತಾ ಹಣ ಹಾಗೂ ಧವಸ ಧಾನ್ಯಗಳನ್ನು ಸಂಗ್ರಹಿಸಿದರು.
ಇದನ್ನೂ ಓದಿ: ಆನೇಕಲ್ ಐತಿಹಾಸಿಕ ಕರಗ ಉತ್ಸವ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ
ಜಮೀನ್ದಾರರಿಗೆ ಬೈದು ಆಕ್ರೋಶ ವ್ಯಕ್ತಪಡಿಸುವ ಗಿರಿಜನರು: ಈ ಹಬ್ಬವನ್ನು ಮೂಲನಿವಾಸಿ ಗಿರಿಜನ ಜನಾಂಗಕ್ಕೆ ಸೇರಿದ ಬೆಟ್ಟಕುರುಬ, ಜೇನುಕುರುಬ, ಬುಡಕಟ್ಟು ಜನಾಂಗಕ್ಕೆ ಸೇರಿದವರು ಹೆಚ್ಚಾಗಿ ಆಚರಿಸುವ ಈ ಕುಂಡೆ ಹಬ್ಬದ ಸಂಭ್ರಮದಲ್ಲಿ ಕೊಡಗಿನ ಕಾಡಂಚಿನ ಜನರು ಸೇರಿ ಆಚರಿಸುವರು. ಈ ಹಿಂದೆ ಕೊಡಗಿನ ಜಮೀನ್ದಾರರು ಕೂಲಿಕಾರ್ಮಿಕರನ್ನು ವರ್ಷವಿಡೀ ಬೈಯ್ಯುತ್ತಿದ್ದರು. ಇದನ್ನು ಗಿರಿಜನರು ಒಂದು ದಿನ ಬೈದು ಗಿರಿಜನರು ತಮ್ಮ ಆಕ್ರೋಶವನ್ನು ತೋಡಿಕೊಂಡು ದೇವರಲ್ಲಿ ಪೂಜೆ ಸಲ್ಲಿಸಿ, ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಈ ಕುಂಡೆ ಹಬ್ಬದ ವಿಶೇಷವಾಗಿದೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಮುತ್ತಪ್ಪ ಉತ್ಸವ
ನಗರ ಪ್ರದೇಶದಲ್ಲಿ ಸುತ್ತಾಡಿ ಭಿಕ್ಷೆ ಬೇಡುವ ಭಕ್ತರು: ಪ್ರತಿ ವರ್ಷದ ಮೇ ತಿಂಗಳ ಕೊನೆಯ ಬುಧವಾರದಂದು ಗಿರಿಜನರು ವಿವಿಧ ವೇಷ ಧರಿಸಿ ಆಚರಣೆ ಮಾಡುತ್ತಾರೆ. ದೇವರಲ್ಲಿ ಹೆಚ್ಚು ಭಯ, ಭಕ್ತಿ ಇರುವ ಈ ಜನಾಂಗ ಭಕ್ತಿಯಿಂದ ಪ್ರಾರ್ಥನೆ ಮಾಡಿ ವೇಷ ಹಾಕುತ್ತಾರೆ(ಕಳಿ ಕಟ್ಟುವುದು). ನಂತರ ಕಾಲುನಡಿಗೆಯಲ್ಲೇ ಸುತ್ತ- ಮುತ್ತಲ ಹಳ್ಳಿ ಸೇರಿದಂತೆ ನಗರಪ್ರದೇಶಗಳಲ್ಲಿ ಸುತ್ತಾಡಿ ಬಿಕ್ಷೆ ಬೇಡುತ್ತಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಪನ್ಯ ಬೆಳ್ಳಾರಿಕಮ್ಮ ದೇವಿ ಉತ್ಸವ: ವಿವಿಧ ಆಟಗಳಲ್ಲಿ ದೇವರಿಗೆ ಭಕ್ತಿ ಸಮರ್ಪಣೆ
ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸುವ ಜನ : ಕಾಡಿನ ದಾರಿಯಲ್ಲೇ ನಡೆದು ತೆರಳಿ ಈ ರೀತಿ ಬೇಡಿದ ಹಣ ಮತ್ತು ದವಸ-ಧಾನ್ಯಗಳನ್ನು ವಿರಾಜಪೇಟೆ ರಸ್ತೆಯಲ್ಲಿರುವ ತಿತಿಮತಿ ಪಕ್ಕ ಇರುವ ದೇವರಪುರದಲ್ಲಿರುವ ಅಯ್ಯಪ್ಪ ಹಾಗೂ ಭದ್ರಕಾಳಿ ದೇವಾಲಯಕ್ಕೆ ತಂದು ಅರ್ಪಿಸಿ ದೇವರ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಇದನ್ನೂ ಓದಿ : ಅಮಾವಾಸ್ಯೆ: ನಿರೀಕ್ಷೆಗೂ ಮೀರಿ ಮಾದಪ್ಪನ ಬೆಟ್ಟಕ್ಕೆ ಭಕ್ತರ ದಂಡು, ಬಿಸಿಲಿನಲ್ಲೂ ವಿವಿಧ ಉತ್ಸವ