ಮೈಸೂರು: ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಸಾಂಪ್ರದಾಯಿಕ ಸರಸ್ವತಿ ಪೂಜೆಯನ್ನು ನೆರವೇರಿಸಿದ್ದು, ವಿದ್ಯಾದೇವತೆಗೆ ಶರನ್ನವರಾತ್ರಿಯಲ್ಲಿ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಸರಸ್ವತಿ ಪೂಜೆಯ ಶುಭಾಶಯ ಕೋರುವ ಪೋಸ್ಟರ್ ಅನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
![Traditional Saraswati Puja by royalty](https://etvbharatimages.akamaized.net/etvbharat/prod-images/16534894_mys.jpg)
ಇಂದು ಶರನ್ನವರಾತ್ರಿಯ 7 ನೇ ದಿನ. ಅರಮನೆಯಲ್ಲಿ ವಿದ್ಯಾ ಅಧಿದೇವತೆಯಾದ ಸರಸ್ವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಬೆಳಗ್ಗೆ 10.30 ರಿಂದ 10.45 ರ ಶುಭ ಮುಹೂರ್ತದಲ್ಲಿ ಅರಮನೆಯ ಕಲ್ಯಾಣಿ ತೊಟ್ಟಿಯಲ್ಲಿ ಪುರಾತನ ಸರಸ್ವತಿ ಫೋಟೋ ಇಟ್ಟು, ಅದರ ಮುಂಭಾಗದಲ್ಲಿ ವೀಣೆ, ತಾಳೆಗರಿ ಗ್ರಂಥಗಳು, ಸಂಸ್ಕೃತ ಗ್ರಂಥಗಳು ಹಾಗೂ ಹಿಂದಿನ ರಾಜರ ಕೆಲವು ಕೃತಿಗಳು ಸೇರಿದಂತೆ ಪುರಾತನ ವಿದ್ಯಾ ಗ್ರಂಥಗಳನ್ನಿಟ್ಟು ರಾಜ ಪುರೋಹಿತರ ಮಾರ್ಗದರ್ಶನದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದ್ದಾರೆ.
![Traditional Saraswati Puja by royalty](https://etvbharatimages.akamaized.net/etvbharat/prod-images/16534894_gmys.jpg)
ನಂತರ ಜಾಲತಾಣದಲ್ಲಿ ನಾಡಿನ ಜನತೆಗೆ ವಿದ್ಯಾದೇವತೆ ಸರಸ್ವತಿಯ ಶುಭಾಶಯದ ಪೋಸ್ಟರ್ ಹಂಚಿಕೊಂಡಿದ್ದಾರೆ. ಇಂದು ರಾತ್ರಿ, ಕನ್ನಡಿ ತೊಟ್ಟಿಯಲ್ಲಿ ಕಾಳರಾತ್ರಿ ಪೂಜೆ ಸಲ್ಲಿಸಿ ಆ ನಂತರ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
![Minister ST Somashekhar Veerabhadra Kunitha](https://etvbharatimages.akamaized.net/etvbharat/prod-images/16534894_ggmys.jpg)
ಅರಮನೆ ಮುಂಭಾಗದ ಸಾಂಸ್ಕೃತಿಕ ವೇದಿಕೆಯಲ್ಲಿ ಸಚಿವ ಎಸ್ ಟಿ ಸೋಮಶೇಖರ್ ವೀರಭದ್ರ ಕುಣಿತದಿಂದ ಗಮನ ಸೆಳೆದರು. ಸಾಂಸ್ಕೃತಿಕ ವೇದಿಕೆಯಲ್ಲಿ ಇಂದು ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ವೇದಿಕೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ವೀರಭದ್ರ ಕುಣಿತಕ್ಕೆ ತಾವು ಸಹ ಹೆಜ್ಜೆ ಹಾಕಿ ಖುಷಿ ಪಟ್ಟು ತಮ್ಮ ಬಾಲ್ಯದ ನೆನಪನ್ನು ಮತ್ತೊಮ್ಮೆ ನೆನಪಿಸಿಕೊಂಡರು.
ಇದನ್ನೂ ಓದಿ: ವಿಶ್ವ ವಿಖ್ಯಾತ ದಸರಾ: ಮೆರುಗು ಕಟ್ಟಿದ ರೈತ ಕ್ರೀಡಾಕೂಟ ಉತ್ಸವ