ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಹಾಗೂ ಅನಧಿಕೃತ ಮಾರಾಟದ ಬಗ್ಗೆ ಹಲವಾರು ರೀತಿ ದೂರುಗಳು ಬರುತ್ತಿವೆ. ಕಳೆದ ಎಂಟು ತಿಂಗಳಿಂದ ಕೋವಿಡ್ ಹಿನ್ನೆಲೆಯಿಂದಾಗಿ ದಂಡ ವಿಧಿಸುವುದು ಹಾಗೂ ತಪಾಸಣೆ ತಂಡಗಳು ಭೇಟಿ ನೀಡುವುದು ಕಡಿಮೆಯಾಗಿತ್ತು. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಸೇವನೆಯನ್ನು ನಾಳೆಯಿಂದ ಕಟ್ಟುನಿಟ್ಟಾಗಿ ನಿಷೇಧ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್‍ಸ್ವಾಮಿ ಸೂಚನೆ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಕೆ.ಎಸ್.ಆರ್.ಟಿ.ಸಿ., ನಗರಸಭೆ ಅಧಿಕಾರಿಗಳ ಸಭೆ ಕರೆದು ತಹಶೀಲ್ದಾರರು ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರಿ ಕಚೇರಿ ಆವರಣಗಳಲ್ಲಿ ಧೂಮಪಾನ, ಮದ್ಯಪಾನ ಸೇವನೆ ಮಾಡಿದವರಿಗೆ ನಾಳೆಯಿಂದ ದಂಡ ವಿಧಿಸುವಂತೆ ತಿಳಿಸಿದರು.
ಜಿಲ್ಲಾ ತಂಬಾಕು ಸಲಹೆಗಾರ ಶಿವಕುಮಾರ್ ಮಾತನಾಡಿ, ಪಂಚಾಯತ್ ಇಲಾಖೆಯ ವತಿಯಿಂದ ಪ್ರತಿ ಪಂಚಾಯಿತಿ ಅಧಿಕಾರಿಯು ಮಾಸಿಕ 20 ಕೋಟ್ಪಾ ಪ್ರಕರಣಗಳನ್ನು ದಾಖಲಿಸುವಂತೆ ಸರ್ಕಾರದ ಅಧಿಸೂಚನೆ ಇದ್ದು, ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು.
ಕೋಟ್ಪಾ ಕಾಯ್ದೆಯಡಿಯಲ್ಲಿ ಸೆಕ್ಷನ್ 5 ಹಾಗೂ 7, 8,9ರ ಅಡಿಯಲ್ಲಿ ಪ್ರತಿ ತಿಂಗಳು ಪ್ರತಿ ಠಾಣೆಯಿಂದ ಪ್ರಕರಣಗಳನ್ನು ದಾಖಲಿಸಿ, ಮಾಸಿಕ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಸಲ್ಲಿಸುವಂತೆ ಮಾಹಿತಿ ನೀಡಿದರು.
ತಂಬಾಕು ಮುಕ್ತ ಮೈಸೂರು ನಗರವನ್ನಾಗಿಸಲು ಮುಖ್ಯವಾಗಿ ಪೊಲೀಸ್ ಇಲಾಖೆಯು ಆರೋಗ್ಯ ಇಲಾಖೆಗೆ ಸಂಪೂರ್ಣವಾದ ಸಹಕಾರ ನೀಡಬೇಕು. ಜಿಲ್ಲೆಯಲ್ಲಿ ಮಾರಾಟವಾಗುವ ನಿರ್ದಿಷ್ಟ ಆರೋಗ್ಯ ಸೂಚನಾ ಫಲಕಗಳಿಲ್ಲದ ಹಾಗೂ ಕಾಳಸಂತೆಯಲ್ಲಿ ಮಾರಾಟವಾಗುವ ತಂಬಾಕು ಉತ್ಪನ್ನಗಳ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಶಿವಪ್ರಸಾದ್ ಮಾತನಾಡಿ, ಚಾಮುಂಡಿ ಬೆಟ್ಟವನ್ನು ತಂಬಾಕು ಮುಕ್ತವನ್ನಾಗಿಸಲು ಮುಂದಾಗಬೇಕು. ಬೆಟ್ಟಕ್ಕೆ ತಂಬಾಕು, ಮದ್ಯಪಾನ ಹಾಗೂ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ಕ್ರಮವಹಿಸಲು, ಬೆಟ್ಟಕ್ಕೆ ಮೆಟ್ಟಿಲು ಮೂಲಕ ಹಾಗೂ ವಾಹನಗಳಲ್ಲಿ ಬರುವವರನ್ನು ಪರೀಶೀಲಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಲಕ್ಷ್ಮಿನಾರಾಯಣ, ಸಂತೋಷ್ ಬಿ., ಬಿ.ಇ.ಒ ಮರಿಸ್ವಾಮಿ ಹಾಗೂ ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಉಪಸ್ಥಿತರಿದ್ದರು.